ಲಖನೌ: ನೋಟ್ ನಿಷೇಧಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸಿದ ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಗರಿಷ್ಠ ಮೌಲ್ಯದ ನೋಟ್ ಬ್ಯಾನ್ ಪ್ರಮುಖ ವಿಷಯವಾಗಲಿದೆ ಎಂದು ಶನಿವಾರ ಹೇಳಿದ್ದಾರೆ.
ನೋಟ್ ನಿಷೇಧದ ನಂತರ ಬ್ಯಾಂಕ್ ಎಟಿಎಂನ ಕ್ಯೂನಲ್ಲಿ ನಿಂತಿರುಗಾಲೇ ಮೃತಪಟ್ಟ 14 ಜನರ ಕುಟುಂಬಕ್ಕೆ ಪರಿಹಾರ ಚೆಕ್ ವಿತರಿಸಿ ಮಾತನಾಡಿದ ಅಖಿಲೇಶ್ ಯಾದವ್, ನಗದು ರಹಿತ ಆರ್ಥಿಕತೆ ಅಚ್ಚೆದಿನ್ ಗಿಂತ ದೊಡ್ಡ ಕನಸು... ಆದರೆ ಕೇಂದ್ರ ಸರ್ಕಾರ ಇದನ್ನು ಹೇಗೆ ಅರಿತುಕೊಂಡಿತು ಎಂಬುದು ತಮಗೆ ಅರ್ಥವಾಗುತ್ತಿಲ್ಲ ಎಂದಿದ್ದಾರೆ.
ನೋಟ್ ನಿಷೇಧದಿಂದ ಜನತೆಗೆ ದ್ರೋಹ ಮಾಡಲಾಗಿದೆ ಮತ್ತು ದೇಶದ ಆರ್ಥಿಕತೆ ಹಾಳಾಗಿದೆ ಎಂದು ನೇರವಾಗಿ ಯಾರ ಹೆಸರು ಪ್ರಸ್ತಾಪಿಸದೆ ಬಿಜೆಪಿ ವಿರುದ್ಧ ಅಖಿಲೇಶ್ ಯಾದವ್ ವಾಗ್ದಾಳಿ ನಡೆಸಿದರು.
500 ಹಾಗೂ 1000 ರುಪಾಯಿ ನೋಟ್ ನಿಷೇಧ ನಿರ್ಧಾರ ಪ್ರಕಟಿಸಿದಾಗ ಜನ ದೊಡ್ಡ ಬದಲಾವಣೆಯಾಗಬಹುದು ಎಂಬ ವಿಶ್ವಾಸದಲ್ಲಿದ್ದರು. ಆದರೆ ನಂತರ ಇದರಿಂದ ಯಾವುದೇ ಪ್ರಯೋಜನ ಆಗಲಿಲ್ಲ ಎಂಬುದು ಅವರಿಗೆ ಅರ್ಥವಾಗಿದೆ. ಈ ಬಗ್ಗೆ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ತಜ್ಞರು ಬರೆಯುತ್ತಿದ್ದಾರೆ ಎಂದಿದ್ದಾರೆ.