ಆಧಾರ್ ಆಧಾರಿತ ಪಾವತಿ (ಸಂಗ್ರಹ ಚಿತ್ರ)
ಮುಂಬೈ: ನವಿ ಮುಂಬೈನ ನೆರುಲ್ ನಲ್ಲಿರುವ ಎಸ್ ಬಿಐ ಕಾಲೋನಿ ಸಂಪೂರ್ಣ ನಗದು ರಹಿತವಾದ ಒಂದೇ ವಾರದಲ್ಲಿ ಮಹಾರಾಷ್ಟ್ರದ ಮತ್ತೊಂದು ಗ್ರಾಮವನ್ನು ನಗದು ರಹಿತವನ್ನಾಗಿ ಮಾಡಲು ಎಸ್ ಬಿಐ ಯೋಜನೆ ರೂಪಿಸಿದೆ.
ಆಧಾರ್ ಕಾರ್ಡ್ ಆಧಾರಿತ ಪಾವತಿಗೆ ಉತ್ತೇಜನ ನೀಡಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮಹಾರಾಷ್ಟ್ರದ ಶಿರ್ಕಿ ಗ್ರಾಮವನ್ನು ಆಯ್ಕೆ ಮಾಡಿಕೊಂಡಿದ್ದು ಗ್ರಾಮದಲ್ಲಿರುವ ಪ್ರತಿಯೊಂದು ಮನೆಗೂ ಎಸ್ ಬಿಐ ಅಧಿಕಾರಿಗಳು/ ಸಿಬ್ಬಂದಿಗಳನ್ನು ಕಳಿಸಲು ನಿರ್ಧರಿಸಿದೆ.
2,000 ಕುಟುಂಬಗಳಿರುವ ಗ್ರಾಮಕ್ಕೆ ಭೇಟಿ ನೀಡಲಿರುವ ಎಸ್ ಬಿಐ ಸಿಬ್ಬಂದಿಗಳು, ಆಧಾರ್ ಕಾರ್ಡ್ ಆಧಾರಿತ ಪಾವತಿ ವ್ಯವಸ್ಥೆ ಬಗ್ಗೆ ಜಾಗೃತಿ ಮೂಡಿಸಲಿದ್ದಾರೆ ಎಂದು ಬ್ಯಾಂಕ್ ಹೇಳಿಕೆ ಬಿಡುಗಡೆ ಮಾಡಿದೆ. ಗ್ರಾಮದಲ್ಲಿರುವ ವ್ಯಾಪಾರಿಗಳಿಗೆ ಈಗಾಗಲೇ ಸರಳವಾದ ಆಂಡ್ರಾಯ್ಡ್ ಫೋನ್, ಯುಎಸ್ ಬಿ- ಆಧಾರಿತ ಬೆರಳಚ್ಚು ಗ್ರಹಿಸುವ ಸಾಧನಗಳನ್ನು ನೀಡಲಾಗಿದೆ.
ವ್ಯಾಪರಿಗಳು ಆಧಾರ್ ಪೇಮೆಂಟ್ ಆಪ್ ನ್ನು ಡೌನ್ ಲೋಡ್ ಮಾಡಿ, ಬ್ಯಾಂಕ್ ಖಾತೆಯನ್ನು ಮೊಬೈಲ್ ಆಪ್ ನಲ್ಲಿ ನೋಂದಣಿ ಮಾಡಿಕೊಳ್ಳಬೇಕಿದೆ. ಗ್ರಾಹಕರು ಆಧಾರ್ ಕಾರ್ಡ್ ಸಂಖ್ಯೆ ನೋಂದಣಿಯಾಗಿರುವ ಬ್ಯಾಂಕ್ ಖಾತೆಯನ್ನು ಹೊಂದಿರಬೇಕಾಗುತ್ತದೆ. ಗ್ರಾಹಕ ಹಾಗೂ ವ್ಯಾಪಾರಿಗಳಿಬ್ಬರಿಗೂ ಅನುಕೂಲವಾಗುವಂತೆ ಆಧಾರ್ ಪೇಮೆಂಟ್ ವ್ಯವಸ್ಥೆಯನ್ನು ರಚಿಸಲಾಗಿದ್ದು, ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಜಾಗೃತಿ ಮೂಡಿಸಲು ಉದ್ದೇಶಿಸಲಾಗಿದೆ ಎಂದು ಎಸ್ ಬಿಐ ನ ಉಪನಿರ್ದೇಶಕರು ತಿಳಿಸಿದ್ದಾರೆ.