ನವದೆಹಲಿ: ಭಾಷಣ ಮಾಡುವುದರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಚತುರನಾಗಿದ್ದು, ಭರವಸೆ ಈಡೇರಿಸುವಲ್ಲಿ ವಿಫಲರಾಗಿದ್ದಾರೆಂದು ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಭಾನುವಾರ ಹೇಳಿದೆ.
ಈ ಕುರಿತಂತೆ ಮಾತನಾಡಿರುವ ಕಾಂಗ್ರೆಸ್ ನಾಯಕ ಮಜೀದ್ ಮೆಮನ್ ಅವರು, ಮನ್ ಕಿ ಬಾತ್ ನ್ನು ಪಕ್ಕಕ್ಕಿಡಿ... ಮೋದಿಯವರು ಭಾಷಣೆ ಮಾಡುವುದರಲ್ಲಿ ಚತುರನಾಗಿದ್ದಾರೆ, ಆದರೆ ನೀಡಿದ ಭರವಸೆಯನ್ನು ಈಡೇರಿಸಲುವಲ್ಲಿ ವಿಫಲರಾಗುತ್ತಿರುವುದು ದುಃಖದ ಸಂಗತಿ (ದುಖ್ ಕಿ ಬಾತ್) ಎಂದು ಹೇಳಿದ್ದಾರೆ.
ಇದೇ ವೇಳೆ ನೋಟು ನಿಷೇಧ ಕುರಿತಂತೆ ಟೀಕೆ ಮಾಡಿರುವ ಅವರು, ತಪ್ಪು ಭರವಸೆಗಳನ್ನು ಪ್ರಧಾನಿ ಮೋದಿಯವರು ಜನತೆಗೆ ನೀಡುತ್ತಿದ್ದು, ಜನರನ್ನು ಮೋಸ ಮಾಡುತ್ತಿದ್ದಾರೆ. ಮುಂಬರುವ ಚುನಾವಣೆಯಲ್ಲಿ ದೇಶದ ಜನತೆ ಬಿಜೆಪಿ ಸರಿಯಾದ ಉತ್ತರವನ್ನು ನೀಡಲಿದೆ ಎಂದು ತಿಳಿಸಿದ್ದಾರೆ.
ನೋಟಿನ ಮೇಲೆ ನಿಷೇಧ ಹೇರಿದ ಬಳಿಕ ಮೋದಿಯವರು ಸಮಸ್ಯೆ ಬಗೆಹರಿಸಲು 50 ದಿನಗಳ ಕಾಲಾವಕಾಶವನ್ನು ಕೇಳಿದ್ದರು. ಗಡುವಿನ ಅಂತಿಮ ದಿನ ಹತ್ತಿರ ಬರುತ್ತಿದೆ. ಇದೀಗ ಯೂ ಟರ್ನ್ ತೆಗೆದುಕೊಳ್ಳುತ್ತಿರುವ ಅವರು, 50 ದಿನದಲ್ಲಿ ಪರಿಸ್ಥಿತಿ ಸಾಮಾನ್ಯವಾಗಿಸುವುದಕ್ಕೆ ಸಾಧ್ಯವಿಲ್ಲ ಎಂದು ಹೇಳುತ್ತಿದ್ದಾರೆ. ಇದು ನಿಜಕ್ಕೂ ಸರಿಯಲ್ಲ. ಮೋದಿ ಜನರಿಗೆ ಮೋಸ ಮಾಡುತ್ತಿದ್ದಾರೆಂದು ಆರೋಪಿಸಿದ್ದಾರೆ.