ಜಮ್ಮು: ಪಾಕಿಸ್ತಾನದ ನಿರಾಶ್ರಿತರ ವಿಷಯದಲ್ಲಿ ಪ್ರತ್ಯೇಕತಾವಾದಿಗಳನ್ನು, ಎನ್ ಸಿ ಯ ನಿಲುವುಗಳನ್ನು ಟೀಕಿಸಿರುವ ಕೇಂದ್ರ ಸಚಿವ ಜಿತೇಂದ್ರ ಸಿಂಗ್, ನಿರಾಶ್ರಿತರ ವಿಚಾರದಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಹಾಗೂ ಪ್ರತ್ಯೇಕತಾವಾದಿಗಳ ಸಂಘಟಾನೆಗಳು ಅನುಕೂಲ ಸಿಂಧು ರಾಜಕೀಯ ಮಾಡುತ್ತಿವೆ ಎಂದಿದ್ದಾರೆ.
ನಿರಾಶ್ರಿತರಿಗೆ ಭಾರತೀಯ ನಾಗರಿಕರ ಗುರುತಿನ ಚೀಟಿ ನೀಡುತ್ತಿರುವುದನ್ನು ವಿರೋಧಿಸುತ್ತಿರುವ ನಡೆಯನ್ನು ಅನಗತ್ಯ ವಿವಾದ, ಅಮಾನವೀಯ ಎಂದು ಹೇಳಿರುವ ಕೇಂದ್ರ ಸಚಿವ ಜಿತೇಂದ್ರ ಸಿಂಗ್, ಜಮ್ಮು-ಕಾಶ್ಮೀರವನ್ನು ತಮ್ಮ ನೆಲವೆಂದು ಅರಸಿ ಬಂದಿರುವ ನಿರಾಶ್ರಿತರಿಗೆ ಆಶ್ರಯವನ್ನು ನಿರಾಕರಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇನ್ನು ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ವಿರುದ್ಧವೂ ವಾಗ್ದಾಳಿ ನಡಿಸಿರುವ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ರಾಜಕೀಯ ಪಕ್ಷಗಳು ಅಧಿಕಾರಕ್ಕೆ ಬಂದ ನಂತರ ಜಮ್ಮು-ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂದು ಪ್ರಮಾಣ ವಚನ ಸ್ವೀಕರಿಸುತ್ತಾರೆ. ಆದರೆ ಒಮ್ಮೆ ಅಧಿಕಾರ ಕಳೆದುಕೊಂಡ ನಂತರ ಪ್ರತ್ಯೇಕತಾವಾದಿಗಳೊಂದಿಗೆ ಸೇರಿ ಜಮ್ಮು-ಕಾಶ್ಮೀರದ ಸ್ಥಾನಮಾನಗಳ ಬಗ್ಗೆ ಪ್ರಶ್ನೆ ಮಾಡುವ ಮೂಲಕ ಅನುಕೂಲಸಿಂಧು ರಾಜಕಾರಣ ಮಾಡುತ್ತಾರೆ ಎಂದು ಜಿತೇಂದ್ರ ಸಿಂಗ್ ವಾಗ್ದಾಳಿ ನಡೆಸಿದ್ದಾರೆ.