ನವದೆಹಲಿ: ನೋಟ್ ನಿಷೇಧದ ವಿರುದ್ಧ ಪ್ರತಿಪಕ್ಷಗಳನ್ನು ಸಂಘಟಿಸುವಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ವಿಫಲವಾಗಿದ್ದು, ಕೇಂದ್ರ ಸರ್ಕಾರದ ಜನ ವಿರೋಧಿ ಕ್ರಮಗಳ ವಿರುದ್ಧ ಕಾಂಗ್ರೆಸ್ ಮಂಗಳವಾರ ಕರೆದಿರುವ 16 ವಿರೋಧ ಪಕ್ಷಗಳ ಜಂಟಿ ಪತ್ರಿಕಾಗೋಷ್ಠಿ ವಿಚಾರದಲ್ಲಿ ಇದೀಗ ಒಡಕು ಕಂಡು ಬಂದಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿಪಿಐ(ಎಂ)ನ ಮುಖ್ಯಸ್ಥ ಸೀತಾರಾಮ್ ಯೆಚುರಿ ಅವರು, ಜಂಟಿ ಪತ್ರಿಕಾಗೋಷ್ಠಿಯಲ್ಲಿ ತಮ್ಮ ಪಕ್ಷ ಪಾಲ್ಗೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇನ್ನೂ ಜನತಾದಳ (ಯು) ಸಹ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಳ್ಳುವ ಬಗ್ಗೆ ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಹೇಳಿದೆ.
ನಾಳೆ ನಡೆಯುವ ಜಂಟಿ ಪತ್ರಿಕಾಗೋಷ್ಠಿಯಲ್ಲಿ 16 ವಿರೋಧ ಪಕ್ಷಗಳು ಇರುವುದಿಲ್ಲ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಅಲ್ಲಿ ಇರುವುದಾಗಿದ್ದರೆ, ಅಸ್ಸಾಂ, ತ್ರಿಪುರಾ ಮತ್ತು ಇತರ ವಿರೋಧ ಪಕ್ಷಗಳಿರುವ ರಾಜ್ಯಗಳ ಮುಖ್ಯಮಂತ್ರಿಗಳು ಏಕೆ ಇರುವುದಿಲ್ಲ ಎಂದು ಸೀತಾರಾಮ್ ಯೆಚೂರಿ ಅವರು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಜಂಟಿ ಪತ್ರಿಕಾಗೋಷ್ಠಿಯನ್ನು ವ್ಯವಸ್ಥಿತವಾಗಿ ಆಯೋಜಿಸಿಲ್ಲ. ಆರ್ಜೆಡಿ, ಮತ್ತು ಎನ್ಸಿಪಿ ಕೂಡಾ ಇದೇ ಬಗೆಯ ಆಕ್ಷೇಪ ವ್ಯಕ್ತಪಡಿಸಿವೆ ಎಂದು ಅವರು ತಿಳಿಸಿದರು.
ಪ್ರಧಾನಿಯವರ ಹೊಸ ಪ್ರಕಟಣೆಗಳು ಬಂದಾಗ ಅವುಗಳ ಸ್ವರೂಪ ನೋಡಿಕೊಂಡು ಪ್ರತಿಭಟನೆಗೆ ಎಡಪಕ್ಷ ಕರೆ ಕೊಡುತ್ತದೆ. ಆಗ ಇತರ ಪಕ್ಷಗಳ ಜೊತೆ ಸಮಾಲೋಚನೆಯನ್ನೂ ನಡೆಸುತ್ತದೆ ಎಂದು ಯೆಚೂರಿ ನುಡಿದರು.
ಜಂಟಿ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಳ್ಳಬೇಕೇ ಅಥವಾ ಬೇಡವೇ ಎಂಬ ಬಗ್ಗೆ ನಾವು ಇನ್ನೂ ನಿರ್ಧರಿಸಿಲ್ಲ ಎಂದು ಜೆಡಿಯು ಧುರೀಣ ಕೆ.ಸಿ. ತ್ಯಾಗಿ ತಿಳಿಸಿದ್ದಾರೆ.