ದೇಶ

ನೋಟು ನಿಷೇಧಕ್ಕೆ ಬೆಂಬಲವಿದೆ, ಗಡುವು ಮುಗಿಯುವವರೆಗೂ ಪ್ರತಿಕ್ರಿಯೆ ನೀಡಲ್ಲ: ಜೆಡಿಯು

Manjula VN

ಪಾಟ್ನ: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೋಟು ನಿಷೇಧ ನಿರ್ಧಾರಕ್ಕೆ ನಮ್ಮ ಬೆಂಬಲವಿದ್ದು, ಕೊಟ್ಟಿರುವ 50 ದಿನಗಳ ಗಡುವು ಮುಗಿಯುವವರೆಗೂ ವಿಚಾರದ ಕುರಿತು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಸಂಯುಕ್ತ ಜನತಾದಳ ಬುಧವಾರ ಹೇಳಿದೆ.

ಈ ಕುರಿತಂತೆ ಮಾತನಾಡಿರುವ ಜೆಡಿ(ಯು) ನಾಯಕ ಸುನಿಲ್ ಕುಮಾರ್ ಅವರು, ನೋಟು ನಿಷೇಧ ನಿರ್ಧಾರ ರಾಷ್ಟ್ರೀಯ ಹಿತಾಸಕ್ತಿಯಾಗಿದ್ದು, ಮೋದಿಯವರ ನಿರ್ಧಾರಕ್ಕೆ ಜೆಡಿಯು ಪಕ್ಷದ ಬೆಂಬಲವಿದೆ. ಈಗಾಗಲೇ ಮೋದಿಯವರಿದೆ 50 ದಿನಗಳ ಕಾಲಾವಕಾಶವನ್ನು ನೀಡಲಾಗಿದ್ದು, ಗಡುವು ಮುಗಿಯುವುದಕ್ಕೂ ಮುನ್ನ ವಿಚಾರದ ಬಗ್ಗೆ ಯಾವುದೇ ಪ್ರತಿಕ್ರಿಯೆಯನ್ನು ನೀಡುವುದಿಲ್ಲ ಎಂದು ಹೇಳಿದ್ದಾರೆ.

ದುಬಾರಿ ನೋಟಿನ ಮೇಲೆ ನಿಷೇಧ ಹೇರಿಕೆಯ ನಿರ್ಧಾರದ ವಿರುದ್ಧ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮತ್ತು ತೃಣಮೂಲ ಕಾಂಗ್ರೆಸ್ ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿಯವರ ನೇತೃತ್ವದಲ್ಲಿ ವಿರೋಧ ಪಕ್ಷಗಳು ಒಗ್ಗಟು ಪ್ರದರ್ಶಿಸುವ ಸಲುವಾಗಿ ನಿನ್ನೆ ಸಭೆಯೊಂದನ್ನು ನಡೆಸಿತ್ತು. ಈ ಸಭೆಗೆ ಎನ್ ಸಿಪಿ ಹಾಗೂ ಜೆಡಿಯು ಪಕ್ಷಗಳು ಮಾತ್ರ ಗೈರುಹಾಜರಾಗಿತ್ತು. ನೋಟು ನಿಷೇಧ ನಿರ್ಧಾರ ಸಂಪೂರ್ಣವಾಗಿ ವಿಫಲವಾಗಿದ್ದು, ಪ್ರಧಾನಿ ಮೋದಿಯವರು ಕೂಡಲೇ ರಾಜೀನಾಮೆಯನ್ನು ನೀಡಬೇಕೆಂದು ರಾಹುಲ್ ಗಾಂಧಿಯವರು ಆಗ್ರಹಿಸಿದ್ದರು. ಈ ಹಿನ್ನಲೆಯಲ್ಲಿ ಜೆಡಿ(ಯು) ನಾಯಕ ಸುನಿಲ್ ಕುಮಾರ್ ಹೇಳಿಕೆಯನ್ನು ನೀಡಿದ್ದಾರೆ.

SCROLL FOR NEXT