ಮುಂಬೈ: ನಗರಸಭೆ ಚುನಾವಣೆ ವೇಳೆ ವಿವಾದಾತ್ಮಕ ಹೇಳಿಕೆ ನೀಡಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ಮಹಾರಾಷ್ಟ್ರ ಬಿಜೆಪಿ ಮುಖ್ಯಸ್ಥ ರಾವ್ ಸಾಹೇಬ್ ದನ್ವೆ ಅವರು ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಐಪಿಸಿ ಸೆಕ್ಸನ್ 171ರಡಿ ದನ್ವೆ ವಿರುದ್ಧ ಪೈಥಾನ್ ಪೊಲೀಸ್ ಠಾಣೆಯಲ್ಲಿ ಕಳೆದ ರಾತ್ರಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಔರಂಗಬಾದ್ ಗ್ರಾಮೀಣ ಪೊಲೀಸ್ ವರಿಷ್ಠಾಧಿಕಾರಿ ನವಿಚಂದ್ರ ರೆಡ್ಡಿ ಅವರು ಇಂದು ತಿಳಿಸಿದ್ದಾರೆ.
ಪೈಥಾನ್ ಉಪ ವಿಭಾಗೀಯ ಅಧಿಕಾರಿ ಕೆ ನೆಟ್ಕೆ ಅವರು ನೀಡಿದ ದೂರಿನ ಆಧಾರದ ಮೇಲೆ ಎಫ್ಐಆರ್ ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಪೈಥಾನ್ ನಲ್ಲಿ ಚುನಾವಣೆ ಪ್ರಚಾರದ ವೇಳೆ ದನ್ವೆ ಅವರು ಲಕ್ಷ್ಮೀ ತಾನಾಗಿಯೇ ಬಂದರೆ ಸುಮ್ಮನೆ ಒಪ್ಪಿಕೊಳ್ಳಿ ಎಂದು ಮತದಾರರಿಗೆ ಹೇಳಿದ್ದರು. ಇದರ ವಿಡಿಯೋ ಕ್ಲಿಪ್ ಪರಿಶೀಲಿಸಿದ ರಾಜ್ಯ ಚುನಾವಣಾ ಆಯೋಗ, ರಾಜ್ಯಬಿಜೆಪಿ ಮುಖ್ಯಸ್ಥನ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಔರಗಂಬಾದ್ ಜಿಲ್ಲಾಧಿಕಾರಿ ನಿಧಿ ಪಾಂಡೆ ಅವರಿಗೆ ಸೂಚಿಸಿತ್ತು.