ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ(ಸಂಗ್ರಹ ಚಿತ್ರ)
ನವದೆಹಲಿ: ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಪೂರ್ವ ದೆಹಲಿಯ ಪತ್ಪರ್ಗಂಜ್ ಕ್ಷೇತ್ರದ ವಿನೋದ್ ನಗರ ಕಚೇರಿಯನ್ನು ದರೋಡೆ ಮಾಡಿರುವ ಕಳ್ಳರು ವರದಿಗಳು, ಕಂಪ್ಯೂಟರ್ ಮತ್ತು ಪ್ರಮುಖ ದಾಖಲೆಗಳನ್ನು ಕದ್ದು ಪರಾರಿಯಾಗಿದ್ದಾರೆ.
ನಿನ್ನೆ ರಾತ್ರಿ ಉಪ ಮುಖ್ಯಮಂತ್ರಿಯವರ ಕಚೇರಿಗೆ ನುಗ್ಗಿದ ದರೋಡೆಕೋರರು ಅಗತ್ಯ ದಾಖಲೆಗಳು ಮತ್ತು ಕಂಪ್ಯೂಟರ್ ನ್ನು ದೋಚಿ ಪರಾರಿಯಾಗಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಒಮ್ವೀರ್ ಸಿಂಗ್ ತಿಳಿಸಿದ್ದಾರೆ.
ದರೋಡೆಕೋರರು ಕಚೇರಿಯ ಬೀಗ ಮುರಿದು ಒಳನುಗ್ಗಿ ಸಿಸಿಟಿವಿ ಕ್ಯಾಮರಾವನ್ನು ಧ್ವಂಸ ಮಾಡಿ ಲೂಟಿ ಮಾಡಿ ಪರಾರಿಯಾಗಿದ್ದಾರೆ.ಕಚೇರಿಯ ಸಿಬ್ಬಂದಿ ಇಂದು ಬೆಳಗ್ಗೆ ಹೋಗಿ ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಪೊಲೀಸ್ ತಂಡ ಶ್ವಾನದಳದೊಂದಿಗೆ ಕಚೇರಿಗೆ ಆಗಮಿಸಿ ಶೋಧ ನಡೆಸಿತು. ವಿಧಿವಿಜ್ಞಾನ ತಂಡ ಬೆರಳಚ್ಚು ತೆಗೆದುಕೊಂಡು ಹೋಗಿದೆ.ತನಿಖೆ ನಡೆಯುತ್ತಿದೆ.
ಎರಡು ಕಂಪ್ಯೂಟರ್ ಗಳ ಲೆಟರ್ ಹೆಡ್ಸ್ ಮತ್ತು ಸಿಪಿಯುಗಳು ಕಾಣೆಯಾಗಿವೆ ಎಂದು ಆಪ್ ನ ಪಂಕಜ್ ಸಿಂಗ್ ತಿಳಿಸಿದ್ದಾರೆ.