ದೇಶ

ಬಾಲಕಿಯ ಅತ್ಯಾಚಾರ, ಹತ್ಯೆ: ನೊಂದ ಕುಟುಂಬದಿಂದ ಇಚ್ಛಾಮರಣ ಕೋರಿ ರಾಷ್ಟ್ರಪತಿಗೆ ಮನವಿ

Lingaraj Badiger
ಚಂಡೀಗಢ: ಪೊಲೀಸರು ಸೂಕ್ತ ಕ್ರಮ ತೆಗೆದುಕೊಳ್ಳುತ್ತಿಲ್ಲ ಮತ್ತು ಸೂಕ್ತ ರೀತಿಯಲ್ಲಿ ಪ್ರಕರಣ ತನಿಖೆ ನಡೆಸುತ್ತಿಲ್ಲ ಎಂದು ಆರೋಪಿಸಿ ಸ್ನೇಹಿತನಿಂದ ಅತ್ಯಾಚಾರಕ್ಕೆ ಒಳಗಾಗಿ ಹತ್ಯೆಯಾದ ಅಪ್ರಾಪ್ತ ಬಾಲಕಿಯ ಪೋಷಕರು ಇಚ್ಛಾಮರಣ ಕೋರಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಗೆ ಪತ್ರ ಬರೆದಿದ್ದಾರೆ.
ಕಳೆದ ತಿಂಗಳು ಹರಿಯಾಣದ ಸೋನಿಪತ್ ಜಿಲ್ಲೆಯಲ್ಲಿ ನಡೆದ 17 ವರ್ಷದ ಬಾಲಕಿಯ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣ ತನಿಖೆ ನಡೆಸುತ್ತಿರುವ ಹರಿಯಾಣ ಪೊಲೀಸರು ಆರೋಪಿಗಳ ವಿರುದ್ಧ ಇದುವರೆಗೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಬಾಲಕಿಯ ಪೋಷಕರು ಪತ್ರದಲ್ಲಿ ಆರೋಪಿಸಿದ್ದಾರೆ. ಅಲ್ಲದೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಮನವಿ ಮಾಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚಿಗೆ ಗೋಹಣದಲ್ಲಿ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರನ್ನು ಭೇಟಿ ಮಾಡಲು ಸಹ ಅವಕಾಶ ನೀಡಲಿಲ್ಲ ಎಂದು ಬಾಲಕಿಯ ತಂದೆ ಆರೋಪಿಸಿದ್ದಾರೆ. ಸರ್ಕಾರ ಹಾಗೂ ಪೊಲೀಸರ ಈ ನಿರ್ಲಕ್ಷದಿಂದಾಗಿ ತಾವು ನೊಂದಿದ್ದು, ತಮಗೆ ಇಚ್ಛಾಮರಣಕ್ಕೆ ಅನುಮತಿ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಪ್ರಥಮ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಓದುತ್ತಿದ್ದ ಬಾಲಕಿ ನವೆಂಬರ್ 12ರಂದು ಕಾಲೇಜ್ ನಿಂದ ನಾಪತ್ತೆಯಾಗಿದ್ದು, ಕೊನೆಯ ಬಾರಿ ತನ್ನ ಗೆಳೆಯ ವಿಕ್ರಮ್ ಗೆ ಕರೆ ಮಾಡಿರುವುದು ಮೊಬೈಲ್ ಕರೆ ದಾಖಲೆಗಳಿಂದ ಪತ್ತೆಯಾಗಿದೆ. ಈ ಸಂಬಂಧ ಪೊಲೀಸರು ವಿಕ್ರಮ್ ನನ್ನು ಕರೆದು ವಿಚಾರಣೆ ನಡೆಸಿ ಬಿಟ್ಟಿದ್ದಾರೆ. ಆದರೆ ಆ ವಿಕ್ರಮ್ ನೇ ತಮ್ಮ ಮಗಳ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಿರುವುದಾಗಿ ಪೋಷಕರು ಆರೋಪಿಸಿದ್ದಾರೆ.
ಘಟನೆಯ ನಂತರ ವಿಕ್ರಮ್ ನಾಪತ್ತೆಯಾಗಿದ್ದು, ವಿಕ್ರಮ್ ನ ಬಗ್ಗೆ ಮಾಹಿತಿ ನೀಡಿದವರಿಗೆ ಹರಿಯಾಣ ಪೊಲೀಸರು 50 ಸಾವಿರ ರುಪಾಯಿ ಬಹುಮಾನ ಘೋಷಿಸಿದ್ದಾರೆ.
SCROLL FOR NEXT