ಬಕ್ಸರ್: ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ನಾಲ್ವರು ಸೇರಿದಂತೆ ಒಟ್ಟು 5 ಕೈದಿಗಳು ಬಿಹಾರದ ಬಕ್ಸರ್ ಕೇಂದ್ರ ಕಾರಾಗೃಹದಿಂದ ಶುಕ್ರವಾರ ರಾತ್ರಿ ಪರಾರಿಯಾಗಿದ್ದಾರೆ.
ಪರಾರಿಯಾದ 5 ಮಂದಿಯನ್ನು ಪ್ರಜಿತ್ ಸಿಂಗ್, ಸೋನು ಪಾಂಡೇ, ಉಪೇಂದ್ರ ಸಾಹ್, ಗಿರ್ಧಾರಿ ರೈ, ಸೋನು ಸಿಂಗ್ ಹಾಗೂ ಸೋನು ಸಿಂಗ್ ಎಂದು ಗುರುತಿಸಲಾಗಿದೆ. ಇವರಲ್ಲಿ ಸೋನು ಸಿಂಗ್‍ಗೆ 10 ವರ್ಷದ ಜೈಲು ಶಿಕ್ಷೆ ಯಾಗಿತ್ತು. ಇನ್ನುಳಿದ ನಾಲ್ವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು ಎಂದು ವರದಿಯಾಗಿದೆ.
ಅನಾರೋಗ್ಯದ ನೆಪ ಹೇಳಿ ಈ 5 ಕೈದಿಗಳು ಜೈಲಿನಲ್ಲಿರುವ ಮೆಡಿಕಲ್ ವಾರ್ಡ್‍ನಲ್ಲಿ ದಾಖಲಾಗಿದ್ದರು. ಶುಕ್ರವಾರ ಮಧ್ಯರಾತ್ರಿ ಸುಮಾರು 12 ರಿಂದ 3 ಗಂಟೆಯ ಒಳಗೆ ಮೆಡಿಕಲ್ ವಾರ್ಡ್‍ನಲ್ಲಿರುವ ಶೌಚಾಲಯದ ಕಿಟಕಿಯನ್ನು ಒಡೆದು ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ. ಇವರು ಪರಾರಿಯಾಗಲು ಬಳಸಿದ ಕಬ್ಬಿಣದ ಸಲಾಕೆ, ಪೈಪ್ ಹಾಗೂ ಧೋತಿ ಸ್ಥಳದಲ್ಲಿ ಪತ್ತೆಯಾಗಿದೆ. ಕೈದಿಗಳು ಪರಾರಿಯಾದ ಹಿನ್ನೆಲೆಯಲ್ಲಿ ಸ್ಥಳೀಯ ಪ್ರದೇಶಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ..
ದಟ್ಟವಾದ ಮಂಜು ಮುಸುಕಿದ್ದ ಕಾರಣ ಕೈದಿಗಳು ಪರಾರಿಯಾಗಲು ಸಹಾಯವಾಗಿದೆ. ಕೈದಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ ಎಂದು ಜೈಲು ಸೂಪರಿಂಡೆಂಟ್ ಹೇಳಿದ್ದಾರೆ.