ನವದೆಹಲಿ: ಹೆಚ್ಚುತ್ತಿರುವ ಹೆಣ್ಣು ಭ್ರೂಣ ಹತ್ಯೆಯನ್ನು ತಡೆಗಟ್ಟಲು ಭ್ರೂಣಲಿಂಗ ಪತ್ತೆಯನ್ನು ಕಡ್ಡಾಯಗೊಳಿಸುವುದರಿಂದ ಸಮಸ್ಯೆ ಜಾಸ್ತಿಯಾಗಬಹುದೇ ಹೊರತು ಕಡಿಮೆಯಾಗುವುದಿಲ್ಲ ಎಂದು ಕಾಂಗ್ರೆಸ್ ಟೀಕಿಸಿದೆ.
ಇಂದು ನಮ್ಮ ದೇಶದಲ್ಲಿ ಹೆಣ್ಣು ಮಕ್ಕಳು ಸುರಕ್ಷಿತರಾಗಿಲ್ಲ. ಅವರ ಜೀವಕ್ಕೆ ಅಸುರಕ್ಷತೆಯಿದೆ. ಲಿಂಗ ಪತ್ತೆ ಮಾಡಿ ದಾಖಲಾತಿ ಮಾಡಿಕೊಂಡರೆ ಹೆಣ್ಣು ಭ್ರೂಣ ಹತ್ಯೆಯನ್ನು ನಿಲ್ಲಿಸಬಹುದು ಎಂಬುದು ಸಚಿವೆ ಮನೇಕಾ ಗಾಂಧಿಯವರ ಅಭಿಪ್ರಾಯ. ಇದು ಧನಾತ್ಮಕ ಪರಿಣಾಮ ಬೀರಬಹುದೇ ಅಥವಾ ಋಣಾತ್ಮಕ ಪರಿಣಾಮವನ್ನುಂಟುಮಾಡಬಹುದೇ ಎಂಬುದನ್ನು ನೋಡಬೇಕಾಗಿದೆ ಎಂದು ಕಾಂಗ್ರೆಸ್ ನಾಯಕ ಪಿಸಿ ಚಾಕೋ ಎಎನ್ ಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಲಿಂಗ ಭ್ರೂಣ ಪತ್ತೆ ಮಾಡಿ ಮಗು ಹೆಣ್ಣೋ, ಗಂಡೋ ಎಂದು ಮಗುವಿನ ತಾಯಿಗೆ ಮತ್ತು ಮನೆಯವರಿಗೆ ಗೊತ್ತಾಗುವುದರಿಂದ ಸಮಸ್ಯೆ ಇನ್ನಷ್ಟು ಹೆಚ್ಚಾಗುತ್ತದೆಯೇ ಹೊರತು ಕಡಿಮೆಯಾಗುವುದಿಲ್ಲ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆಯಾಗಿ ಮನೇಕಾ ಗಾಂಧಿಯವರು ಈ ಹೇಳಿಕೆಯನ್ನು ಅತ್ಯಂತ ವಿಶ್ವಾಸದಿಂದ ನೀಡಿದ್ದಾರೆಯೇ ಇಲ್ಲವೇ ಎಂದು ನನಗೆ ಸಂಶಯವಾಗುತ್ತದೆ. ಇದು ಸರಿಯಾಗಿ ಯೋಚಿಸಿ ತೆಗೆದುಕೊಂಡ ನಿಯಮ ಎಂದು ನನಗೆ ಅನ್ನಿಸುವುದಿಲ್ಲ. ಇದರಿಂದ ಹಾನಿಯಾಗಲೂಬಹುದು ಎಂದು ಹೇಳಿದ್ದಾರೆ.