ದೇಶ

ಹೆಣ್ಣು ಭ್ರೂಣಹತ್ಯೆ ತಡೆಗಟ್ಟಲು ಕಡ್ಡಾಯ ಲಿಂಗ ಪತ್ತೆಗೆ ಸರ್ಕಾರ ಚಿಂತನೆ: ಮನೇಕಾ ಗಾಂಧಿ

Sumana Upadhyaya

ನವದೆಹಲಿ: ಹೆಣ್ಣು ಮಗುವಿನ ಭ್ರೂಣಹತ್ಯೆಯನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಭ್ರೂಣ ಲಿಂಗ ಪತ್ತೆಯನ್ನು ಕಡ್ಡಾಯಗೊಳಿಸುವ ಸಾಧ್ಯತೆಯಿದೆ. ಈ ಮೂಲಕ ಭ್ರೂಣಪತ್ತೆ ನಿಷೇಧ ಕಾನೂನನ್ನು ಕೇಂದ್ರ ಸರ್ಕಾರ ತೆಗೆದುಹಾಕಲು ಚಿಂತನೆ ನಡೆಸುತ್ತಿದೆ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಮನೇಕಾ ಗಾಂಧಿ ಹೇಳಿದ್ದಾರೆ.

ಅವರು ಜೈಪುರದಲ್ಲಿ ನಿನ್ನೆ ಅಖಿಲ ಭಾರತ ಪ್ರಾದೇಶಿಕ ಸಂಪಾದಕರ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿ, ಹೆಣ್ಣು ಮಗುವೆಂದು ಹುಟ್ಟುವ ಮೊದಲೇ ಕೊಲ್ಲುವವರನ್ನು ಪತ್ತೆಹಚ್ಚಲು ಸರ್ಕಾರ ಈ ಕ್ರಮಕ್ಕೆ ಮುಂದಾಗುತ್ತಿದೆ. ಈ ಸಂಬಂಧ ವ್ಯವಸ್ಥೆಯೊಂದನ್ನು ಜಾರಿಗೆ ತರುವ ಬಗ್ಗೆ ಪ್ರಸ್ತಾಪವೊಂದನ್ನು ಕೇಂದ್ರ ಸಚಿವ ಸಂಪುಟ ಮುಂದಿಡಲಾಗಿದೆ ಎಂದು ಹೇಳಿದರು.

 ಈ ಹೊಸ ಕಾನೂನಿನ ಪ್ರಕಾರ, ಗರ್ಭಿಣಿ ಮಹಿಳೆ ಮತ್ತು ಆಕೆಯ ಭ್ರೂಣದಲ್ಲಿರುವ ಮಗುವಿನ ದಾಖಲಾತಿಯನ್ನು ಇಲಾಖೆಯ ಅಧಿಕಾರಿಗಳು ದಾಖಲಿಸಿಕೊಳ್ಳುತ್ತಾರೆ. ಮಗು ಹುಟ್ಟುವವರೆಗೆ ಕಾಲಕಾಲಕ್ಕೆ ಮಾಹಿತಿ ಪಡೆಯುತ್ತಾರೆ. ಒಂದು ವೇಳೆ ಮಹಿಳೆ ಗರ್ಭಪಾತ ಮಾಡಿಸಿಕೊಂಡರೆ ಅದಕ್ಕೆ ಕಾರಣಗಳೇನು ಎಂದು ವೈದ್ಯರ ಪ್ರಮಾಣಪತ್ರ ಮೂಲಕ ಸರ್ಕಾರಕ್ಕೆ ನೀಡಬೇಕು.

ಪ್ರಸವ ಪೂರ್ವ ಮತ್ತು ಪ್ರಸವಪೂರ್ವ ರೋಗ ನಿರ್ಣಯದ ತಂತ್ರ ಕಾಯ್ದೆ(ಪಿಸಿಪಿಎನ್ ಡಿಟಿ) 1994ರಲ್ಲಿ ಜಾರಿಗೆ ಬಂದಿದ್ದು, ಅದರಂತೆ ಭ್ರೂಣದ ಲಿಂಗ ಪತ್ತೆ ಮಾಡುವುದು ಕಾನೂನು ರೀತ್ಯಾ ಅಪರಾಧವಾಗಿದೆ.

2011ರ ಜನಗಣತಿ ಪ್ರಕಾರ ಭಾರತದಲ್ಲಿ ಪ್ರತಿ ಸಾವಿರ ಗಂಡು ಮಕ್ಕಳಿಗೆ 943 ಹೆಣ್ಣು ಮಕ್ಕಳಿದ್ದಾರೆ. ಹರ್ಯಾಣ ರಾಜ್ಯದಲ್ಲಿ ಅತ್ಯಂತ ಕಡಿಮೆ ಅಂದರೆ ಸಾವಿರ ಗಂಡು ಮಕ್ಕಳಿಗೆ 889 ಹೆಣ್ಣು ಮಕ್ಕಳಿದ್ದಾರೆ.

ಹೆಣ್ಣು ಮಗುವಿನ ಭ್ರೂಣ ಹತ್ಯೆ ಕಳವಳಕಾರಿ ಸಂಗತಿಯಾಗಿದ್ದು, ಅದನ್ನು ದೇಶಾದ್ಯಂತ ತಡೆಗಟ್ಟಬೇಕೆಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೇ ಖುದ್ದು ಆಸಕ್ತಿ ವಹಿಸಿ ''ಬೇಟಿ ಬಚಾವೋ, ಬೇಟಿ ಪಡಾವೋ'' ಕಾರ್ಯಕ್ರಮವನ್ನು ಕಳೆದ ವರ್ಷ ಜನವರಿ 22ರಂದು ಜಾರಿಗೆ ತಂದಿದ್ದರು.

SCROLL FOR NEXT