ನವದೆಹಲಿ: ಗ್ರಾಮಾಂತರ ಪ್ರದೇಶಗಳಲ್ಲಿ ಉದ್ಯೋಗ ಸೃಷ್ಟಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿರುವ ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ದೃಢೀಕರಣ ಯೋಜನೆಗೆ (ನೇರೆಗಾ ಯೋಜನೆ) ಯುಪಿಎ ಸರ್ಕಾರದ ಅವಧಿಯಲ್ಲಿ ಸಾಕಷ್ಟು ಬದಲಾವಣೆಯನ್ನು ನೀಡಲಾಗಿದೆ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಮಂಗಳವಾರ ಹೇಳಿದ್ದಾರೆ.
ನರೇಗಾ ಯೋಜನೆ ಜಾರಿಯಾಗಿ ಇಂದಿಗೆ 10 ವರ್ಷವಾದ ಹಿನ್ನೆಲೆಯಲ್ಲಿ ನವದೆಹಲಿಯಲ್ಲಿ ನಡೆದ ನರೇಗಾ ಸಮಾವೇಶವನ್ನುದ್ದೇಶಿಸಿ ಮಾತನಾಡಿರುವ ಅವರು, ಎನ್ ಡಿಎ ಸರ್ಕಾರದ ಅವಧಿಯಲ್ಲಿ ನರೇಗಾ ಯೋಜನೆಗೆ ಸಾಕಷ್ಟು ಬದಲಾವಣೆಯನ್ನು ತರಲಾಗಿದೆ. ಪ್ರಸ್ತುತ ಇರುವ ಯೋಜನೆಯಲ್ಲಿ ಜಾತಿ ತಾರತಮ್ಯವಿಲ್ಲ. ಅಲ್ಲದೆ, ಯೋಜನೆಯು ಮತ್ತಷ್ಟು ಜನರನ್ನು ತಲುಪಿಸುವ ಸಲುವಾಗಿ ಯೋಜನಗೆ ಸರ್ಕಾರ ಮತ್ತಷ್ಟು ಹಣವನ್ನು ಮೀಸಲಿರಿಸಿದೆ ಎಂದು ಹೇಳಿದ್ದಾರೆ.
ಯೋಜನೆಗೆ ಅಭಿವೃದ್ಧಿಪಡಿಸಲು ಸರ್ಕಾರ ಸಾಕಷ್ಟು ಬದಲಾವಣೆಗಳನ್ನು ತಂದಿದೆ. ಯೋಜನೆ ಸಾಕಷ್ಟು ವರ್ಷದ ಹಿಂದಿನಿಂದಲೂ ಜಾರಿಯಲ್ಲಿದ್ದರೂ ಯಶಸ್ಸು ಕಂಡಿರಲಿಲ್ಲ. ಹೀಗಾಗಿ ಯೋಜನೆ ಬಗ್ಗೆ ಜನರಲ್ಲಿ ಹಲವು ಅಭಿಪ್ರಾಯಗಳು ಮೂಡಿಬಂದಿದ್ದವು. ಯೋಜನೆ ಜಾರಿಗೆ ಬಂದು 7-8 ವರ್ಷಗಳು ಕಳೆದರೂ ಯಾವುದೇ ಬದಲಾವಣೆಗಳಾಗಿರಲಿಲ್ಲ. ಆದರೆ, 2014-15ರ ಅವಧಿಯಲ್ಲಿ ಯೋಜನೆಗೆ ಬದಲಾವಣೆಯನ್ನು ತರಲಾಯಿತು.
ಎನ್ ಡಿಎ ಸರ್ಕಾರ ಅಧಿಕಾರಕ್ಕೆ ಬಂದಾಗ ಯೋಜನೆಯ ಬಗ್ಗೆ ಸಾಕಷ್ಟು ಗೊಂದಲಗಳು ಮೂಡಿದ್ದವು. ಸರ್ಕಾರ ನರೇಗಾ ಯೋಜನೆಯನ್ನು ನಿಲ್ಲಿಸುವುದೋ ಅಥವಾ ಮುಂದುವರೆಸುವುದೋ ಎಂಬುದರ ಬಗ್ಗೆ ಹಲವು ಅಭಿಪ್ರಾಯಗಳು ಮೂಡಿಬಂದಿದ್ದವು. ಆದರೆ, ನಮ್ಮ ಸರ್ಕಾರ ಎಲ್ಲದಕ್ಕೂ ತೆರೆಯೆಳೆದು ಯೋಜನೆಯನ್ನು ಹೊಸ ರೀತಿಯಲ್ಲಿ ಮುಂದುವರೆಸುವುದಾಗಿ ಹೇಳಿತ್ತು. ಅದೇ ರೀತಿಯಾಗಿ ಯೋಜನೆಗೆ ಹೊಸ ಬದಲಾವಣೆಗಳನ್ನು ತಂದಿತು. ಅಲ್ಲದೆ, ಯೋಜನೆಗೆ ಈ ಹಿಂದಿನ ಸರ್ಕಾರದಂತೆ ನಿಗದಿ ಮಾಡಿದ್ದ ಮೊತ್ತದಲ್ಲಿ ಕಡಿತ ಮಾಡದೆ, ಬಜೆಟ್ ನಲ್ಲಿ ನಿಗದಿಯಾದ ಮೊತ್ತಕ್ಕಿಂತ ಹೆಚ್ಚಿನ ಮೊತ್ತವನ್ನು ಖರ್ಚು ಮಾಡುವ ಮೂಲಕ ಯೋಜನೆಗೆ ನಮ್ಮ ಸರ್ಕಾರ ಹೆಚ್ಚು ಒತ್ತು ನೀಡಿತು.
ಎನ್ ಡಿಎ ಸರ್ಕಾರ ಯೋಜನೆಗೆ ಹೆಚ್ಚಿನ ಅನುದಾನ ಘೋಷಿಸುವುದು ನಂತರ ಅದನ್ನು ಕಡಿತ ಮಾಡುವ ಕ್ರಮವನ್ನು ಅನುಸರಿಸಿಲ್ಲ. ಘೋಷಣೆ ಮಾಡಿದ್ದ ಹಣಕ್ಕಿಂತ ಬೇರೆ ಮೂಲಗಳಿಂದ ಹೆಚ್ಚಿನ ಹಣವನ್ನು ಯೋಜನೆಗೆ ಬಳಸಿದ್ದೇವೆ. ಅಭಿವೃದ್ಧಿ ಕಾರ್ಯಗಳಿಗೆ ಬಜೆಟ್ ನಲ್ಲಿ ನಿಗದಿಪಡಿಸಿದ್ದ ಹಣದಲ್ಲಿ ಕಡಿತ ಮಾಡದ ಮೊದಲ ವರ್ಷ ಎಂದರೆ ಅದು 2015-16ರ ಸಾಲಿನ ವರ್ಷವಾಗಿದೆ ಎಂದು ಹೇಳಿದ್ದಾರೆ.