ನವದೆಹಲಿ: ಸಲಿಂಗಕಾಮಕ್ಕೆ ಕಾನೂನು ಮಾನ್ಯತೆ ಕೋರಿ ಸಲಿಂಗಕಾಮಿಗಳು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ಸಂವಿಧಾನ ಪೀಠಕ್ಕೆ ರವಾನಿಸಿದೆ.
ಅರ್ಜಿ ಸಂಬಂಧ ಮಂಗಳವಾರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಅರ್ಜಿಯನ್ನು ಐದು ಸದಸ್ಯರ ಸಂವಿಧಾನ ಪೀಠಕ್ಕೆ ರವಾನೆ ಮಾಡಿದೆ. ಸುಪ್ರೀಂ ಕೋರ್ಟ್ ನಿಂದ ನಾಝ್ ಫೌಂಡೇಷನ್ ಸಲ್ಲಿಕೆ ಮಾಡಿದ್ದ ಅರ್ಜಿ ಸಂವಿಧಾನ ಪೀಠಕ್ಕೆ ರವಾನೆಯಾಗುತ್ತಿದ್ದಂತೆಯೇ ದೆಹಲಿಯಲ್ಲಿ ಸಲಿಂಗಕಾಮಿ ಸಮುದಾಯ ಸಂಭ್ರಮಾಚರಣೆಯಲ್ಲಿ ತೊಡಗಿದೆ. ಇಂದು ಅರ್ಜಿಯ ವಿಚಾರಣೆ ನಡೆಸಿದ ಹಿರಿಯ ನ್ಯಾಯಮೂರ್ತಿಗಳಾದ, ಟಿಎಸ್ ಠಾಕೂರ್, ಅನಿಲ್ ಆರ್ ಡೇವ್ ಮತ್ತು ಜಗದೀಶ್ ಸಿಂಗ್ ಖೆಹರ್ ಅವರು, 377 ಕಾಯ್ದೆಯನ್ನು ಮರುಪರಿಶೀಲಿಸುವಂತೆ ಸೂಚನೆ ನೀಡಿದೆ.
ಈ ಬಗ್ಗೆ ಮಾತನಾಡಿರುವ ಹಿರಿಯ ವಕೀಲ ಕಪಿಲ್ ಸಿಬಲ್ ಅವರು, ಪ್ರಸ್ತುತ ವಿಚಾರ ಮಹತ್ವದ ಸಂವಿಧಾನಿಕ ವಿಚಾರವಾಗಿದ್ದು, ಖಂಡಿತ ಈ ಪ್ರಕರಣವನ್ನು 5 ಸದಸ್ಯರ ಸಂವಿಧಾನಿಕ ಪೀಠವೇ ವಿಚಾರಣೆಗೆ ಕೈಗೆತ್ತಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.
ಸುಪ್ರೀಂ ಕೋರ್ಟ್ ನ ಈ ಮಹತ್ವದ ನಡೆ ಸಲಿಂಗಕಾಮಿ ಸಮುದಾಯದಲ್ಲಿ ತೀವ್ರ ಸಂಭ್ರಮಾಚರಣೆಗೆ ಕಾರಣವಾಗಿದ್ದು, ತಮಗೆ ಕಾನೂನು ರೀತ್ಯ ಮಾನ್ಯತೆ ದೊರೆಯುತ್ತದೆ ಎಂಬ ಆಶಾಭಾವನೆ ವ್ಯಕ್ತಪಡಿಸಿದ್ದಾರೆ.