ನವದೆಹಲಿ: ಪಾಕಿಸ್ತಾನ ವೀಸಾ ನಿರಾಕರಣೆ ಸಾಕಷ್ಟು ನೋವುಂಟು ಮಾಡಿದೆ ಎಂದು ಖ್ಯಾತ ಬಾಲಿವುಡ್ ನಟ ಅನುಪಮ್ ಖೇರ್ ಅವರು ಮಂಗಳವಾರ ಹೇಳಿದ್ದಾರೆ.
ವೀಸಾ ನಿರಾಕರಣೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ತಮಗೆ ವೀಸಾ ನೀಡಲು ಪಾಕಿಸ್ತಾನ ಹೈಕಮೀಷನ್ ನಿರಾಕರಿಸಿರುವುದು ಬೇಸರ ತಂದಿದೆ. ಕರಾಚಿಯಲ್ಲಿ ಫೆಬ್ರವರಿ 5 ರಂದು ನಡೆಯಲಿರುವ ಸಾಹಿತ್ಯ ಉತ್ಸವದಲ್ಲಿ ಪಾಲ್ಗೊಳ್ಳಲು ಭಾರತದಿಂದ 18 ಮಂದಿಯನ್ನು ಆಯ್ಕೆ ಮಾಡಲಾಗಿತ್ತು. ಈ ಪೈಕಿ 17 ಮಂದಿಗೆ ವೀಸಾ ನೀಡಲಾಗಿದ್ದು, ನನಗೆ ವೀಸಾ ನೀಡಲು ಪಾಕ್ ಹೈಕಮೀಷನ್ ನಿರಾಕರಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ವೀಸಾ ನಿರಾಕರಣೆಗೆ ಕಾರಣವೇನಿರಬಹುದು ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು, ವೀಸಾ ನಿರಾಕರಣೆಗೆ ಒಂದು ರೀತಿಯಲ್ಲಿ ಹೇಳಬೇಕಾದರೆ ನಾನು ಕಾಶ್ಮೀರಿ ಪಂಡಿತನೆಂಬ ಕಾರಣಕ್ಕೆ ಇರಬುಹುದು. ಅಥವಾ ಅಸಹಿಷ್ಣುತೆ ಬಗ್ಗೆ ವಾದ ಮಾಡಿದ್ದಕ್ಕೂ ಇರಬಹುದು. ಭಾರತದಲ್ಲಿ ಈ ಹಿಂದೆ ಅಸಹಿಷ್ಣುತೆ ಬಗ್ಗೆ ಮಾತನಾಡುತ್ತಿದ್ದವರು ಈಗ ಮಾತನಾಡಲಿ ಎಂದು ಹೇಳಿದ್ದಾರೆ.
ಇದೇ ಪಾಕಿಸ್ತಾನದಿಂದ ಯಾವುದಾದರೂ ಆಫರ್ ಗಳು ಬಂದರೆ ನಟಿಸುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು, ಕಲೆಗೆ ಹಾಗೂ ನಟನೆಗೆ ಇಂತಹದ್ದೇ ಎಂಬ ಯಾವುದೇ ರೇಖೆಯಿಲ್ಲ. ಈ ಹಿಂದೆಯೂ ನಾನು ಪಾಕಿಸ್ತಾನದ ಹಲವರೊಂದಿಗೆ ಕೆಲಸ ಮಾಡಿದ್ದೇನೆ.
ಗುಂಪಿನಲ್ಲಿ ಪಾಕಿಸ್ತಾನಕ್ಕೆ ಹೋಗಲು ಈಗಾಗಲೇ ವೀಸಾ ಪಡೆದಿರುವವರಲ್ಲಿ ಮತ್ತಾರಿಗಾದರೂ ವೀಸಾ ನಿರಾಕಣೆಯಾಗಿದ್ದರೂ ಕೂಡ ನಾನೂ ಪಾಕಿಸ್ತಾನಕ್ಕೆ ಹೋಗುತ್ತಿರಲಿಲ್ಲ. ಮತ್ತೆ ಆಹ್ವಾನ ದೊರೆತರೆ ಖಂಡಿತವಾಗಿ ಪಾಕ್ ಗೆ ಹೋಗುತ್ತೇನೆ ಎಂದು ಹೇಳಿದ್ದಾರೆ.
ಇದೇ ವೇಳೆ ತಮ್ಮ ಹಾಗೂ ಕಾಂಗ್ರೆಸ್ ನಾಯಕ ಶಸಿ ತರೂರ್ ಅವರ ನಡುವೆ ವಾಕ್ಸಮರ ಕುರಿತಂತೆ ಮಾತನಾಡಿರುವ ಅವರು, ತರೂರ್ ನನಗೆ ಸಂದೇಶವೊಂದನ್ನು ಕಳುಹಿಸಿದ್ದರು. ಸಂದೇಶದಲ್ಲಿ ಇಬ್ಬರೂ ಒಪ್ಪಂದಕ್ಕೆ ಬರೋಣ ಎಂದು ಹೇಳಿದ್ದರು ಎಂದು ಹೇಳಿದ್ದಾರೆ.