ನವದೆಹಲಿ: ಕುಡಿದು ವಾಹನ ಚಾಲನೆ ಮಾಡುವ ಚಾಲಕ ಒಂದು ರೀತಿಯಲ್ಲಿ ಸಜೀವ ಮಾನವ ಬಾಂಬ್ ಇದ್ದಂತೆ. ಇಂತಹವರಿಂದ ಅಪಾಯ ಕಟ್ಟಿಟ್ಟ ಬುತ್ತಿ ಎಂದು ದೆಹಲಿ ನ್ಯಾಯಾಲಯ ಬುಧವಾರ ಹೇಳಿದೆ.
ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸುತ್ತಿದ್ದ ವೇಳೆ ದೆಹಲಿಯ ಅಡಿಷನಲ್ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಲೋಕೇಶ ಕುಮಾರ್ ಶರ್ಮಾ ಅವರು ಇಂತಹುದೊಂದು ವಿಶ್ಲೇಷಣೆ ಮಾಡಿದ್ದು, "ಕುಡಿದು ವಾಹನ ಚಾಲನೆ ಮಾಡುವ ಚಾಲಕ ಸಜೀವ ಆತ್ಮಾಹುತಿ ಮಾನವ ಬಾಂಬ್ ಇದ್ದಂತೆ, ವಾಹನ ಚಾಲನೆ ವೇಳೆ ಆತ ಎಷ್ಟು ಮಂದಿಯ ಜೀವ ಬೇಕಿದ್ದರೂ ತೆಗೆಯಬಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಸಂಚಾರಿ ಅಪರಾಧ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದಿನ ವಿಚಾರಣಾ ನ್ಯಾಯಾಲಯವು ತನಗೆ 6 ದಿನಗಳ ಸೆರೆವಾಸ ಮತ್ತು 2000 ರೂಪಾಯಿಗಳ ದಂಡ ವಿಧಿಸಿ ನೀಡಿದ್ದ ತೀರ್ಪಿನ ವಿರುದ್ಧ ಬದರ್ಪುರ ನಿವಾಸಿ ಜೋಗಿ ವರ್ಗೀಸ್ ಎಂಬುವವರು ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿದ ನ್ಯಾಯಾಧೀಶರು, "ನನ್ನ ಅಭಿಪ್ರಾಯದ ಪ್ರಕಾರ ಇಂತಹ ಅಪರಾಧಗಳಿಗೆ ಯಾವುದೇ ರೀತಿಯ ಕ್ಷಮೆ ನೀಡದೆ ಕಠಿಣ ಶಿಕ್ಷೆ ನೀಡಬೇಕು. ರಸ್ತೆ ಮೇಲೆ ಆತ ಎಸಗುವ ಸಣ್ಣ ತಪ್ಪಿನಿಂದಾಗಿ ಆತನೂ ಸೇರಿದಂತೆ ರಸ್ತೆಯ ಬದಿಯಲ್ಲಿರುವ ಪಾದಚಾರಿಗಳು ಮತ್ತು ಇತರರಿಗೆ ಮಾರಕವಾಗುವ ಸಂಭವವಿದೆ. ಪ್ರಕರಣ ಮತ್ತು ಸಂದರ್ಭಗಳ ಅವಲೋಕನದ ಪ್ರಕಾರ ಆರೋಪಿತ ವ್ಯಕ್ತಿ ಯಾವುದೇ ರೀತಿಯಿಂದಲೂ ಕ್ಷಮೆಗೆ ಅರ್ಹನಲ್ಲ" ಎಂದು ಅಭಿಪ್ರಾಯ ಪಟ್ಟಿದ್ದಾರೆ.
"ಕುಡಿದ ಮತ್ತಿನಲ್ಲಿ ದ್ವಿಚಕ್ರ ವಾಹನ ಓಡಿಸುತ್ತಿದ್ದ ವೇಳೆಯಲ್ಲಿ ಆರೋಪಿ ವ್ಯಕ್ತಿಯ ರಕ್ತದಲ್ಲಿ ಇದ್ದ ಮದ್ಯದ ಅಂಶ ಮಿತಿಗಿಂತ 42 ಪಟ್ಟಿನಷ್ಟು ಹೆಚ್ಚು. ಆದ್ದರಿಂದ ಆತ ಯಾವುದೇ ರಿಯಾಯ್ತಿಗೂ ಅರ್ಹನಲ್ಲ. ಹಾಗಾಗಿ ವಿಚಾರಣಾ ನ್ಯಾಯಾಲಯದ ತೀರ್ಪಿನಲ್ಲಿ ಹಸ್ತಕ್ಷೇಪದ ಅಗತ್ಯವಿಲ್ಲ. ವಿಚಾರಣಾ ನ್ಯಾಯಾಲಯ ಸಮರ್ಪಕವಾಗಿಯೇ ತೀರ್ಪು ನೀಡಿದೆ ಎಂದು ದೆಹಲಿ ಸೆಷನ್ಸ್ ನ್ಯಾಯಾಲಯ ಹೇಳಿದೆ.