ಚೆನ್ನೈ: ಯುವ ಗಾಯಕಿ ಹಾಗೂ ಸಂಗೀತ ನಿರ್ದೇಶಕಿ ಶಾನ್ ಜಾನ್ಸನ್ (29) ಅವರ ಮೃತ ದೇಹ ಶುಕ್ರವಾರ ಚೆನ್ನೈನಲ್ಲಿರುವ ಅಪಾರ್ಟ್ ಮೆಂಟ್ ವೊಂದರಲ್ಲಿ ಪತ್ತೆಯಾಗಿರುವುದಾಗಿ ತಿಳಿದುಬಂದಿದೆ.
ಶಾನ್ ಜಾನ್ಸನ್ ಅವರು ಸಂಗೀತ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದ ದಿವಂಗತ ಜಾನ್ಸನ್ ಅವರ ಮಗಳಾಗಿದ್ದು ಹಲವು ದಿನಗಳಿಂದ ಚೆನ್ನೈ ಅಪಾರ್ಟ್ ಮೆಂಟ್ ವೊಂದರ ಫ್ಲ್ಯಾಟ್ ನಲ್ಲಿ ನೆಲೆಯೂರಿದ್ದರು. ಕರ್ನಾಟಕ ಹಾಗೂ ಪಾಶ್ಚಿಮಾತ್ಯ ಸಂಗೀತದಲ್ಲಿ ಪ್ರವೀಣೆಯಾಗಿರುವ ಶಾನ್ ಅವದು ಗುರುವಾರ ರಾತ್ರಿ ರೆಕಾರ್ಡಿಂಗ್ ಮುಗಿಸಿಕೊಂಡು ಫ್ಲ್ಯಾಟ್ ಗೆ ಆಗಮಿಸಿದ್ದರು. ಶುಕ್ರವಾರ ಕೂಡ ಇನ್ನೊಂದು ರೆಕಾರ್ಡಿಂಗ್ ಹೋಗುವುದಾಗಿ ಹೇಳಿಕೊಂಡಿದ್ದರು. ಆದರೆ, ನಿನ್ನೆ ಸಂಜೆ ಅವರ ಮೃತ ದೇಹ ಪತ್ತೆಯಾಗಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಶುಕ್ರವಾರ ಶಾನ್ ಅವರ ತಾಯಿ ಹಲವು ಬಾರಿ ಕರೆ ಮಾಡಿದ್ದಾರೆ. ಆದರೆ, ಶಾನ್ ಫೋನ್ ಸ್ವೀಕರಿಸದ ಹಿನ್ನೆಲೆಯಲ್ಲಿ ಗಾಬರಿಗೊಂಡ ಅವರು ಸಂಬಂಧಿಯೊಬ್ಬರೊಂದಿಗೆ ಶಾನ್ ಇದ್ದ ಫ್ಲ್ಯಾಟ್ ಗೆ ಬಂದಿದ್ದಾರೆ. ಈ ವೇಳೆ ಶಾನ್ ಮೃತದೇಹ ಪತ್ತೆಯಾಗಿದೆ. ಶಾನ್ ಸಾವಿಗೆ ಈ ವರೆಗೂ ಯಾವುದೇ ಕಾರಣಗಳು ತಿಳಿದುಬಂದಿಲ್ಲ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.