ಕಾಕಿನಾಡ; ಮೀಸಲಾತಿ ಆಗ್ರಹಿಸಿ ಆಂಧ್ರಪ್ರದೇಶದಲ್ಲಿ ನಡೆಯುತ್ತಿರುವ ಕಾಪು ಹೋರಾಟಕ್ಕೆ ಬೆಂಬಲ ಸೂಚಿಸಿದ್ದಕ್ಕಾಗಿ ಮುಂಜಾಗ್ರತಾ ಕ್ರಮವಾಗಿ ನಟ ಚಿರಂಜೀವಿ ಅವರನ್ನು ಸೋಮವಾರ ಬಂಧನಕ್ಕೊಳಪಡಿಸಲಾಗಿದೆ ಎಂದು ತಿಳಿದುಬಂದಿದೆ.
ಕಾಪು ಸಮುದಾಯಕ್ಕೆ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಮೀಸಲಾತಿ ದೊರಕಿಸಬೇಕೆಂದು ಆಗ್ರಹಿಸಿ ಕಾಪು ನಾಯಕ ಮುಗ್ರಗಡ ಪದ್ಮನಾಭಂ ಅವರು ಅಂಧ್ರಪ್ರದೇಶದಲ್ಲಿ ಅನಿರ್ಧಾಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ನಡೆಸುತ್ತಿದ್ದಾರೆ. ನಟ ಚಿರಂಜೀವಿ ಸಹ ಇದೇ ಸಮುದಾಯಕ್ಕೆ ಸೇರಿರುವುದರಿಂದ ಸಮುದಾಯ ನಡೆಸುತ್ತಿರುವ ಪ್ರತಿಭಟನೆಯಲ್ಲಿ ಭಾಗಿಯಾಗಲು ನಿರ್ಧರಿಸಿದ್ದರು. ಈ ಮಾಹಿತಿ ತಿಳಿದ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ನಟ ಹಾಗೂ ಮಾಜಿ ಕೇಂದ್ರ ಸಚಿವರಾದ ಚಿರಂಜೀವಿ ಅವರನ್ನು ರಾಜಮಂಡ್ರಿ ಏರ್ ಪೋರ್ಟ್ ನಲ್ಲಿ ಬಂಧನಕ್ಕೊಳಪಡಿಸಿದ್ದಾರೆ.
ಚಿರಂಜೀವಿ ಮತ್ತು ಪಿಸಿಸಿ ಅಧ್ಯಕ್ಷ ರಘುವೀರ್ ರೆಡ್ಡಿ ಸಹ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದ್ದರಿಂದ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಚಿರಂಜೀವಿ ಅವರನ್ನು ಬಂಧನಕ್ಕೊಳಪಡಿಸಿರುವುದಕ್ಕೆ ವಿರೋಧ ವ್ಯಕ್ತಪಡಿಸಿರುವ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಅವರನ್ನು ಕೂಡಲೇ ಬಿಡುಗಡೆ ಮಾಡುವಂತೆ ಪ್ರತಿಭಟನೆ ನಡೆಸುತ್ತಿದ್ದಾರೆ.
ಹಲವು ದಿನಗಳಿಂದಲೂ ತೋಳಿನ ನೋವಿನಿಂದ ಬಳಲುತ್ತಿದ್ದ ನಟ ಚಿರಂಜೀವಿ ಅವರು ಇತ್ತೀಚೆಗಷ್ಟೇ ತೋಳಿಗೆ ಶಸ್ತ್ರಚಿಕಿತ್ಸೆಯೊಂದನ್ನು ಮಾಡಿಸಿಕೊಂಡಿದ್ದರು. ವೈದ್ಯರು ಎರಡು ವಾರಗಳ ಕಾಲ ವಿಶ್ರಾಂತಿ ತೆಗೆದುಕೊಳ್ಳುವಂತೆ ಸಲಹೆ ನೀಡಿದ್ದರೂ. ಆದರೂ, ವೈದ್ಯರ ಸಲಹೆಯನ್ನೂ ಪ್ರತಿಭಟನೆಯಲ್ಲಿ ಭಾಗಿಯಾಗಲು ತೀರ್ಮಾನಿಸಿದ್ದರು ಎಂದು ಹೇಳಲಾಗುತ್ತಿತ್ತು.