ಅಮರಾವತಿ: ಕಾಪು ಸಮುದಾಯವನ್ನು ಹಿಂದುಳಿದ ವರ್ಗಕ್ಕೆ ಸೇರಿಸಬೇಕು ಎಂಬ ಆಗ್ರಹದೊಂದಿಗೆ ಮುದ್ರಗಡ ಪದ್ಮನಾಭಂ ಅವರು ಆರಂಭಿಸಿದ್ದ ಉಪವಾಸ ಸತ್ಯಾಗ್ರಹ ಅಂತ್ಯಗೊಳ್ಳುವ ಸಾಧ್ಯತೆ ಇದೆ.
ನಿನ್ನೆಯಷ್ಟೇ ಅಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಪದ್ಮನಾಭಂ ಅವರ ಪಶ್ಚಿಮ ಗೋದಾವರಿ ಜಿಲ್ಲೆಯ ನಿವಾಸಕ್ಕೆ ಭೇಟಿ ನೀಡಿ ಚರ್ಚೆ ನಡೆಸಿದ್ದರು. ಅಲ್ಲದೆ ಪದ್ಮನಾಭಂ ಅವರ ಬಹುತೇಕ ಬೇಡಿಕೆಗಳನ್ನು ಈಡೇರಿಸುವ ಆಶ್ವಾಸನೆಯನ್ನು ನೀಡಿದ್ದರು ಎಂದು ಹೇಳಲಾಗುತ್ತಿದೆ. ಈ ಹಿನ್ನಲೆಯಲ್ಲಿ ಪದ್ಮನಾಭಂ ಅವರು ತಮ್ಮ ಉಪವಾಸ ಸತ್ಯಾಗ್ರಹವನ್ನು ಕೈಬಿಡಲಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು ಚಂದ್ರಬಾಬು ಭೇಟಿ ಬಳಿಕ ಆಡಳಿತಾರೂಢ ಟಿಡಿಪಿ ಪಕ್ಷದ ಶಾಸಕ ಬೊಡ್ಡು ಭಾಸ್ಕರ ರಾಮಾರಾವ್ ಮತ್ತು ತೋಟಾ ತ್ರಿಮೂರ್ತುಲು ಅವರು ಪದ್ಮನಾಭಂ ಅವರ ನಿವಾಸಕ್ಕೆ ಆಗಮಿಸಿ ಚರ್ಚಿಸಿದ್ದರು. ಭೇಟಿ ಬಳಿಕ ಕೆಲವೇ ಸಮಯದಲ್ಲಿ ಪದ್ಮನಾಭಂ ಅವರ ನಿವಾಸದ ಸುತ್ತಮುತ್ತ ಏರ್ಪಡಿಸಲಾಗಿದ್ದ ಬಿಗಿ ಪೊಲೀಸ್ ಭದ್ರತೆಯನ್ನು ಸಡಿಲಗೊಳಿಸಲಾಗಿದೆ. ಇನ್ನು ಮೂಲಗಳು ತಿಳಿಸಿರುವಂತೆ ಕಾಪು ಸಮುದಾಯ ಅಭಿವೃದ್ಧಿಗಾಗಿ ಆಂಧ್ರ ಸರ್ಕಾರ ಉದ್ದೇಶಿಸಿರುವ ಕಾಪು ಅಭಿವೃದ್ಧಿ ಸಮಿತಿಗೆ ರುದ್ರಗಡ ಪದ್ಮನಾಭಂ ಅವರನ್ನು ನಾಮನಿರ್ದೇಶನ ಮಾಡುವ ಕುರಿತು ಈ ಇಬ್ಬರು ನಾಯಕರು ಚರ್ಚಿಸಿದ್ದಾರೆ ಎಂದು ತಿಳಿದುಬಂದಿದೆ.
ಇಂದು ಬೆಳಗ್ಗೆ ನಡೆದ ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಬೊಡ್ಡು ಭಾಸ್ಕರ ರಾಮಾರಾವ್ ಮತ್ತು ತೋಟಾ ತ್ರಿಮೂರ್ತುಲು ಅವರು, ಪದ್ಮನಾಭಂ ಅವರ ಬೇಡಿಕೆಗಳಿಗೆ ಸರ್ಕಾರ ಸೂಕ್ತ ರೀತಿಯಲ್ಲಿ ಸ್ಪಂಧಿಸಿದೆ. ಶೀಘ್ರದಲ್ಲಿಯೇ ಅವರು ತಮ್ಮ ಉಪವಾಸ ಸತ್ಯಾಗ್ರಹವನ್ನು ಕೈ ಬಿಡುವ ವಿಶ್ವಾಸವಿದೆ ಎಂದು ಹೇಳಿದರು.