ಹೈದ್ರಾಬಾದ್: ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ(ಟಿಪಿಸಿಸಿ) ಮುಖ್ಯಸ್ಥ ಎನ್ ಉತ್ತಮ್ ಕುಮಾರ್ ರೆಡ್ಡಿ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಮೊಹಮ್ಮದ್ ಅಲಿ ಶಬ್ಬೀರ್ ಮೇಲೆ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಐಎಂ ಸಂಸದ ಅಸಾದುದ್ದಿನ್ ಓವೈಸಿ ಸೋಮವಾರ ಪೊಲೀಸರಿಗೆ ಶರಣಾಗಿದ್ದಾರೆ.
ಹೈದ್ರಾಬಾದ್ ಮಹಾನಗರ ಪಾಲಿಕೆಗೆ ನಡೆದ ಚುನಾವಣೆ ಸಂದರ್ಭದಲ್ಲಿ ಓವೈಸಿ ನೇತತ್ವದ ಎಂಐಎಂ ಕಾರ್ಯಕರ್ತರು ಕಾಂಗ್ರೆಸ್ ನಾಯಕರ ಮೇಲೆ ಹಲ್ಲೆ ನಡೆಸಿದ್ದರು. ಉತ್ತಮ್ ಕುಮಾರ್ ಗಂಭೀರವಾಗಿ ಗಾಯಗೊಂಡಿದ್ದರು. ಈ ಸಂಬಂಧ ಓವೈಸಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿತ್ತು.
ಈ ಸಂಬಂಧ ಇಂದು ದಕ್ಷಿಣ ವಿಭಾಗದ ಪೊಲೀಸ್ ಅಧಿಕಾರಿ ಡಿಸಿಪಿ ವಿ ಸತ್ಯನಾರಾಯಣ ಅವರ ಬಳಿ ಬಂದು ಓವೈಸಿ ಶರಣಾಗಿದ್ದಾರೆ. ತದ ನಂತರ ಓವೈಸಿ ಸೇರಿದಂತೆ ಇತರೆ ಆರೋಪಿಗಳನ್ನು ಕೋರ್ಟ್ ಗೆ ಹಾಜರಪಡಿಸಲಾಗಿತ್ತು. ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಓವೈಸಿ ಸೇರಿದಂತೆ ಬಂಧನಕ್ಕೊಳಗಾಗಿದ್ದ ಇತರ ಕಾರ್ಯಕರ್ತರಿಗೆ ಜಾಮೀನು ನೀಡಿದೆ.