ನವದೆಹಲಿ: 2014 -15 ರಲ್ಲಿ ಒಟ್ಟು 437 .35 ಕೋಟಿ ರೂಪಾಯಿ ದೇಣಿಗೆ ಸಂಗ್ರಹಿಸಿರುವ ಬಿಜೆಪಿ ಅತಿ ಹೆಚ್ಚು ದೇಣಿಗೆ ಪಡೆದ ಪಕ್ಷವಾಗಿದೆ.
ಅಸೋಸಿಯೇಷನ್ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್ಸ್(ಎಡಿಆರ್) ಹಾಗೂ ನ್ಯಾಷನಲ್ ಎಲೆಕ್ಷನ್ ವಾಚ್( ಎನ್.ಇ ಡಬ್ಲ್ಯೂ) ವಿವಿಧ ರಾಜಕೀಯ ಪಕ್ಷಗಳು 2014 -15 ರಲ್ಲಿ ಸ್ವೀಕರಿಸಿರುವ ದೇಣಿಗೆ ಮೊತ್ತದ ಬಗ್ಗೆ ವರದಿ ಪ್ರಕಟಿಸಿದೆ. ವರದಿ ಪ್ರಕಾರ ಬಿಜೆಪಿ ಅತಿ ಹೆಚ್ಚು ಮೊತ್ತದ ದೇಣಿಗೆ ಪಡೆದಿದ್ದರೆ, ಆಮ್ ಆದ್ಮಿ ಪಕ್ಷದ ದೇಣಿಗೆಯಲ್ಲೂ ಏರಿಕೆ ಕಂಡಿದೆ.
2013 -14 ರಿಂದ 2014 -15 ರವರೆಗೆ ಒಟ್ಟು 44 .71 ಕೋಟಿ ರೂಪಾಯಿ ದೇಣಿಗೆ ಸಂಗ್ರಹಿಸಿದ್ದು ಶೇ.275 ರಷ್ಟು ಏರಿಕೆಯಾಗಿದೆ. ಖಾಸಗಿ ಹಾಗೂ ಉದ್ಯಮಿಗಳಿಂದ ಬಿಜೆಪಿಗೆ ಅತಿ ಹೆಚ್ಚು ದೇಣಿಗೆ ಬಂದಿದ್ದು 437 ಕೋಟಿ ರೂಪಾಯಿ ಸಂಗ್ರಹಿಸಲು ಸಾಧ್ಯವಾಗಿದೆ ಎಂದು ವರದಿ ತಿಳಿಸಿದೆ.
ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಿರುವ ಎನ್ ಸಿಪಿ ದೇಣಿಗೆ ಸಂಗ್ರಹದಲ್ಲಿ ಶೇ.177 ರಷ್ಟು ಏರಿಕೆ ಕಂಡಿರುವುದಾಗಿ ತಿಳಿಸಿದೆ. 2013 -14 ರಲ್ಲಿ 14 .02 ಕೋಟಿ ಇದ್ದ ಪಕ್ಷದ ದೇಣಿಗೆ ಮೊತ್ತ, 2014 -15 ರಲ್ಲಿ 38 .82 ಕೋಟಿಯಷ್ಟಾಗಿದೆ.
ಇನ್ನು ಕಾಂಗ್ರೆಸ್ ಪಕ್ಷ 138 .98 ಕೋಟಿ ದೇಣಿಗೆ ಸಂಗ್ರಹಿಸಿದೆ ಆದರೆ ದೇಣಿಗೆ ನೀಡಲಾಗಿರುವ ಚೆಕ್/ ಡಿಡಿ ನಂಬರ್ ಗಳ ವಿವರಗಳನ್ನು ನೀಡಿಲ್ಲ. ಬಿಜೆಪಿಗೆ ಉದ್ಯಮಿಗಳು ಹಾಗೂ ಖಾಸಗಿ ವ್ಯಕ್ತಿಗಳಿಂದ ದೇಣಿಗೆ ಬಂದಿದ್ದರೆ. ಆಮ್ ಆದ್ಮಿ ಪಕ್ಷಕ್ಕೆ ವಿದೇಶಗಳಿಂದಲೇ ಸುಮಾರು ಶೇ.24 ರಷ್ಟು ದೇಣಿಗೆ ಬಂದಿದ್ದು ದೇಣಿಗೆ ನೀಡಿರುವವರ 111 ಜನರ ಪ್ಯಾನ್ ಹಾಗೂ ವಿಳಾಸಗಳನ್ನು ಬಹಿರಂಗಪಡಿಸಿಲ್ಲ.