ನವದೆಹಲಿ/ ಕಾಠ್ಮಂಡು: ನೇಪಾಳದ ಮಾಜಿ ಪ್ರಧಾನಿ ಸುಶೀಲ್ ಕೊಯಿರಾಲಾ (77) ಮಂಗಳವಾರ ನಿಧನರಾಗಿದ್ದಾರೆ. ನ್ಯುಮೋನಿಯಾದಿಂದ ಬಳಲುತ್ತಿದ್ದ ಇವರು ರಾತ್ರಿ 12.50ಕ್ಕೆ ವಿಧಿವಶರಾಗಿದ್ದಾರೆ ಎಂದು ಬಲ್ಲಮೂಲಗಳು ಹೇಳಿವೆ.
2014 ಫೆಬ್ರವರಿ 10ರಂದು ನೇಪಾಳದ ಪ್ರಧಾನಿಯಾಗಿ ಅಧಿಕಾರವೇರಿದ್ದ ಕೊಯಿರಾಲಾ ಅದೇ ವರ್ಷ ಅಕ್ಟೋಬರ್‌ನಲ್ಲಿ ಅಧಿಕಾರದಿಂದ ಕೆಳಗಿಳಿದಿದ್ದರು.
1939 ಅಗಸ್ಟ್ 12 ರಂದು ಬನಾರಸ್‌ನಲ್ಲಿ ಜನಿಸಿದ್ದ ಇವರು ಮಾಜಿ ಪ್ರಧಾನಿಗಳಾದ ಮಾತ್ರಿಕಾ ಪ್ರಸಾದ್ ಕೊಯಿರಾಲಾ, ಗಿರಿಜಾ ಪ್ರಸಾದ್ ಕೊಯಿರಾಲಾ ಮತ್ತು ಬಿಶ್ವೇಶ್ವರ್ ಪ್ರಸಾದ್ ಕೊಯಿರಾಲಾ ಅವರ ಸಂಬಂಧಿಯಾಗಿದ್ದಾರೆ.
1954 ರಲ್ಲಿ ರಾಜಕೀಯ ಪ್ರವೇಶಿಸಿದ್ದ ಇವರು 16 ವರ್ಷಗಳ ಕಾಲ ಭಾರತದಲ್ಲಿದ್ದರು. 1973ರಲ್ಲಿ ವಿಮಾನ ಹೈಜಾಕ್ ಪ್ರಕರಣದಲ್ಲಿ ಭಾಗಿಯಾಗಿದ್ದ ಇವರು ಮೂರು ವರ್ಷಗಳ ಕಾಲ ಭಾರತದ ಜೈಲಿನಲ್ಲಿ ಶಿಕ್ಷೆ ಅನುಭವಿಸಿದ್ದರು.
ನಾಲಗೆ ಕ್ಯಾನ್ಸರ್‌ಗಾಗಿ ಇವರು ಚಿಕಿತ್ಸೆ ಪಡೆದಿದ್ದರು. ಶ್ವಾಸಕೋಶದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಇವರು ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಅಮೆರಿಕದಲ್ಲಿ ಚಿಕಿತ್ಸೆ ಪಡೆದಿದ್ದರು.