ಚೆನ್ನೈ: ಭಾರತೀಯ ಅನಿಲ ಪ್ರಾಧಿಕಾರ (ಗೇಲ್) ಕೈಗೆತ್ತಿಕೊಂಡಿರುವ ಕೊಚ್ಚಿ- ಕೊಟ್ಟನಾಡು- ಮಂಗಳೂರು- ಬೆಂಗಳೂರು ಅನಿಲ ಪೈಪ್‌ಲೈನ್ ಯೋಜನೆಗೆ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ತಗಾದೆ ತೆಗೆದಿದ್ದಾರೆ.
ಅನಿಲ ಕೊಳವೆ ಮಾರ್ಗ ಯೋಜನೆಗಾಗಿ ರೂಪಿಸಿರುವ ಪಥದಿಂದ ಕೊಳವೆ ಹಾದು ಹೋಗುವ ಈರೋಡ್, ತಿರುಪುರ್, ಕೊಯಮತ್ತೂರು, ನಾಮಕ್ಕಲ್, ಧರ್ಮಪುರಿ, ಕೃಷ್ಣಗಿರಿ ಹಾಗೂ ಸೇಲಂ ಜಿಲ್ಲೆಗಳಿಗೆ ಅತಿ ಹೆಚ್ಚಿನ ಪ್ರಮಾಣದ ಹಾನಿಯಾಗುತ್ತದೆ. ಹೀಗಾಗಿ ಈ ಪೈಪ್‌ಲೈನ್ ಯೋಜನೆ ಸಂಬಂಧ ಹೊರಡಿಸಲಾಗಿರುವ ಅಧಿಸೂಚನೆಯನ್ನೇ ರದ್ದುಗೊಳಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ರೈತರ ಜಮೀನುಗಳಲ್ಲಿ ಹಾದುಹೋಗುವ ಈ ಯೋಜನೆಯಿಂದಾಗಿ 1.20 ಲಕ್ಷ ಮಾವು, ಹಲಸು ಹಾಗೂ ತೆಂಗಿನ ಮರಗಳನ್ನು ಕಡಿಯಬೇಕಾಗುತ್ತದೆ. ಹೊಂಡ ಹಾಗೂ ಬಾವಿ ತೆಗೆಯುವುದಕ್ಕೆ ನಿರ್ಬಂಧ ವಿಧಿಸಲಾಗುತ್ತದೆ. ಅದರ ಬದಲು ರಾಷ್ಟ್ರೀಯ ಹೆದ್ದಾರಿ ಪಕ್ಕ ಹಾದುಹೋಗುವಂತೆ ಪೈಪ್‌ಲೈನ್ ಯೋಜನೆ ನಿರ್ಮಿಸುವ ಕುರಿತು ಪರಿಶೀಲಿಸುವಂತೆ ಗೇಲ್‌ಗೆ ಸೂಚಿಸಿ ಎಂದು ಮನವಿ ಮಾಡಿದ್ದಾರೆ.
ಕೇರಳದ ಕೊಚ್ಚಿಯಿಂದ ಕರ್ನಾಟಕಕ್ಕೆ ನಿತ್ಯ 4 ದಶಲಕ್ಷ ಮೆಟ್ರಿಕ್ ಸ್ಟಾಂಡರ್ಡ್ ಕ್ಯುಬಿಕ್ ಮೀಟರ್ ಅನಿಲ ತರುವ ಯೋಜನೆಯನ್ನು ಗೇಲ್ ಹಾಕಿಕೊಂಡಿದೆ. ಕರ್ನಾಟಕದಲ್ಲಿ ದಕ್ಷಿಣ ಕನ್ನಡ, ಚಾಮರಾಜನಗರ, ಮಂಡ್ಯ ಹಾಗೂ ಬೆಂಗಳೂರಿನಲ್ಲಿ ಪೈಪ್‌ಲೈನ್ ನಿರ್ಮಾಣವಾಗಲಿದೆ.