ಬೆಂಗಳೂರು: ಪ್ರತಿ ವರ್ಷ ಬೆಂಗಳೂರಿನಲ್ಲಿ ವೀಸಾ ಅವಧಿ ಮುಗಿದಿದ್ದರೂ ಅಕ್ರಮವಾಗಿ ನೆಲಸಿರುವ ಸುಮಾರು 300 ವಿದೇಶಿಯರನ್ನು ಗಡಿಪಾರು ಮಾಡಲಾಗುತ್ತದೆ ಎಂದು ವರದಿಗಳು ತಿಳಿಸಿವೆ.
ವ್ಯಾಸಂಗ, ಪ್ರವಾಸ, ವೈದ್ಯಕೀಯ ಉದ್ದೇಶ ಸೇರಿ ನಾನಾ ಕಾರಣಗಳಿಗೆ ಭಾರತಕ್ಕೆ ಬಂದು ವೀಸಾ ಅವಧಿ ಮುಗಿದರೂ ನಗರದಲ್ಲಿ ಉಳಿದುಕೊಂಡಿರುತ್ತಾರೆ. ಅದರಲ್ಲಿ ಬಹುತೇಕರು ನೈಜೀರಿಯಾ, ದಕ್ಷಿಣ ಆಫ್ರಿಕಾಗೆ ಸೇರಿದವರಾಗಿರುತ್ತಾರೆ ಎಂದು ವಿದೇಶಿಗಳ ಪ್ರಾದೇಶಿಕ ನೋಂದಣಿ ಕಚೇರಿಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಈಗಾಗಲೇ ಅಕ್ರಮವಾಗಿ ನೆಲಸಿರುವ 700 ವಿದೇಶಿಯರ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ. 700 ಮಂದಿಯಲ್ಲಿ ಬಹುತೇಕರು ಆಫ್ರಿಕಾದ ವಿದ್ಯಾರ್ಥಿಗಳೇ. ಬೆಂಗಳೂರಿನಲ್ಲಿ 24,000 ವಿದೇಶಿಯರಿದ್ದಾರೆ. ಅದನ್ನು ಹೊರತು ಪಡಿಸಿದರೆ, ಕರ್ನಾಟಕದ ಮಣಿಪಾಲ್, ಮೈಸೂರು ಮತ್ತು ಮಂಗಳೂರಿನಲ್ಲಿ ಹೆಚ್ಚು ವಿದೇಶಿಯರಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಅಕ್ರಮವಾಗಿ ನೆಲೆಸಿರುವ ವಿದ್ಯಾರ್ಥಿಗಳ ಬಗ್ಗೆ ಕಾನೂನು ಕ್ರಮ ಕೈಗೊಳ್ಳಲು ಪೊಲೀಸರಿಗೆ ನಮ್ಮ ಕಛೇರಿ ಶಿಫಾರಸು ಮಾಡುತ್ತದೆ. ಅಷ್ಟೇ ಅಲ್ಲದೇ, ಅವರ ಪಾಸ್ ಪೋರ್ಟ್ ಗಳನ್ನು ಬ್ಲಾಕ್ ಲಿಸ್ಟ್ ಗೆ ಹಾಕಲಾಗುತ್ತದೆ ಎಂದು ಅವರು, ಕಳೆದ ಮೂರು ವರ್ಷಗಳಿಂದ 250ರಿಂದ 300 ವಿದೇಶಿಯರನ್ನು ಗಡಿಪಾರು ಮಾಡಲಾಗಿದೆ ಎಂದು ಹೇಳಿದ್ದಾರೆ.