ಇಮ್ರಾನ್ ಹುಸೈನ್ - ಅರವಿಂದ್ ಕೇಜ್ರಿವಾಲ್
ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಂಪುಟದ ಸಚಿವರೊಬ್ಬರು ಭ್ರಷ್ಟಾಚಾರ ಮಾಡುತ್ತಿದ್ದಾರೆ ಎಂದು ಆರೋಪಿಸುತ್ತಿರುವ ಕಾಂಗ್ರೆಸ್ ಇದಕ್ಕೆ ಸಾಕ್ಷ್ಯವಾಗಿ ವಿಡಿಯೋವೊಂದನ್ನು ಮಂಗಳವಾರ ಬಿಡುಗಡೆ ಮಾಡಿದೆ.
ದೆಹಲಿಯ ಆಪ್ ಸರ್ಕಾರದ ಸಚಿವ ಇಮ್ರಾನ್ ಹುಸೈನ್ ಮೇಲೆ ಕಾಂಗ್ರೆಸ್ ಭ್ರಷ್ಟಾಚಾರದ ಆರೋಪ ಹೊರಿಸಿದೆ. ಮಂಗಳವಾರ ಪತ್ರಿಕಾಗೋಷ್ಠಿ ಕರೆದು ರಹಸ್ಯ ಕಾರ್ಯಾಚರಣೆಯ ಮೂಲಕ ತಾವು ಸೆರೆ ಹಿಡಿದಿರುವ ವೀಡಿಯೋವನ್ನು ಕಾಂಗ್ರೆಸ್ ಬಹಿರಂಗ ಪಡಿಸಿದೆ. ಕಾಂಗ್ರೆಸ್ ಆರೋಪದ ಪ್ರಕಾರ ಈ ವೀಡಿಯೋದಲ್ಲಿ ಆಪ್ ಸಚಿವ ಇಮ್ರಾನ್ ಹುಸೈನ್‌ರ ಕಚೇರಿ ಸಹಾಯಕ ಹಮ್ಮದ್ ಮತ್ತು ಬಿಲ್ಡರ್ ಆಗಿರುವ ಖಾಸಿಂ ಎಂಬವರ ನಡುವೆ ನಡೆದ ಮಾತುಕತೆಗಳಿವೆ.
ಬಿಲ್ಡರ್ ಖಾಸಿಂ ನಿಂದ ಹುಸೈನ್ ರು. 25 ಲಕ್ಷ ಲಂಚಕ್ಕಾಗಿ ಬೇಡಿಕೆಯೊಡ್ಡುತ್ತಿರುವ ಮಾತುಕತೆಗಳು ಇಲ್ಲಿವೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಜಯ್ ಮೆಕೇನ್, ಇಮ್ರಾನ್ ಹುಸೈನ್‌ನ ಪರವಾಗಿ ಅವರ ಸಹಾಯಕ ಖಾಸಿಂ ಅವರಲ್ಲಿ ಲಂಚದ ಬೇಡಿಕೆಯೊಡ್ಡಿದ್ದಾರೆ ಎಂದು ಹೇಳಿದ್ದಾರೆ. ಖಾಸಿಂ ಅವರಿಗೆ ಇಮ್ರಾನ್ ಹುಸೈನ್‌ರ ಸಹೋದರ ಫುರ್ಖಾನ್ ಹುಸೈನ್ ಕೂಡಾ ಫೋನ್ ಮಾಡಿದ್ದರು ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ಆಪ್ ಸಚಿವರ ಮೇಲೆ ಲಂಚದ ಆರೋಪ ಹೊರಿಸಿ ಕಾಂಗ್ರೆಸ್ ಹಲವಾರು ಟ್ವೀಟ್‌ಗಳನ್ನು ಮಾಡಿದೆ.
ಪತ್ರಿಕಾಗೋಷ್ಠಿಯಲ್ಲಿ ಆಪ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಅಜಯ್ ಮಕೇನ್ ಕೇಜ್ರಿವಾಲ್ ಸರ್ಕಾರದ ಸಚಿವ ಹುಸೈನ್ ಅವರ ಬಗ್ಗೆ ಸಿಬಿಐ ತನಿಖೆ ನಡೆಸಬೇಕು. ಆರೋಪ ಹೊತ್ತಿರುವ ಸಚಿವರು ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದ್ದಾರೆ.