ನವದೆಹಲಿ: ಆರ್ ಕೆ ಪಚೌರಿ ವಿರುದ್ಧ ಟಿಇಆರ್‌ಐ (The Energy and Resources Institute) ಮಾಜಿ ಉದ್ಯೋಗಿಯೊಬ್ಬರು ಲೈಂಗಿಕ ಆರೋಪ ಮಾಡಿದ್ದಾರೆ.
2003ರಲ್ಲಿ ಕೆಲಸಕ್ಕೆ ಸೇರಿದ್ದ ಮಹಿಳೆಯೊಬ್ಬರು ಟಿಇಆರ್‌ಐ ನಲ್ಲಿ ಒಂದು ವರ್ಷ ಕಾರ್ಯ ನಿರ್ವಹಿಸಿದ್ದರು. ಆ ಹೊತ್ತಲ್ಲಿ ಟಿಇಆರ್‌ಐ ಡಿಜಿ ಆಗಿದ್ದ ಪಚೌರಿ ಆಕೆಗೆ ಲೈಂಗಿಕ ಉಪದೇಶಗಳನ್ನು ನೀಡಿದ್ದರು ಎಂಬುದು ಆರೋಪ. ಈ ಬಗ್ಗೆ ಟಿಇಆರ್‌ಐನ ಹಿರಿಯ ಅಧಿಕಾರಿಗಳಲ್ಲಿ ಹೇಳಿದ್ದರೂ ಅವರ್ಯಾರೂ ನನ್ನ ಸಹಾಯಕ್ಕೆ ಬರಲಿಲ್ಲ ಎಂದು ಮಹಿಳೆ ದೂರಿದ್ದಾರೆ.
ಮಹಿಳೆಯ ಆರೋಪದ ಪ್ರಕಾರ, ಪಚೌರಿ ಆಕೆಯನ್ನು ತನ್ನ ಕಚೇರಿಗೆ ಕರೆದು ಲೈಂಗಿಕ ವಿಷಯಗಳ ಬಗ್ಗೆ ಮಾತಾಡುತ್ತಿದ್ದರು. ಅಷ್ಟೇ ಅಲ್ಲದೆ ಆಕೆಗೆ ಲೈಂಗಿಕ ದ್ವಂದಾರ್ಥದ ಪದ ಬಳಸಿ ಹೆಸರಿಟ್ಟಿದ್ದ ಪಚೌರಿ, ಖಾಸಗಿ ಭೇಟಿಗಳಲ್ಲಿ ಆ ಹೆಸರು ಹೇಳಿ ಕರೆಯುತ್ತಿದ್ದರು. ನನ್ನ ಕೈಯನ್ನು ಹಿಡಿದು ನನ್ನನ್ನು ಸ್ಪರ್ಶಿಸಲು ಪಚೌರಿ ಯತ್ನಿಸಿದ್ದರು.
ನಾನು ಎಷ್ಟೇ ದಪ್ಪಗಿರುವ ಹೆಣ್ಣನ್ನೂ ಎತ್ತುತ್ತೇನೆ. ನಿಮ್ಮನ್ನು ಎತ್ತಿಕೊಳ್ಳುವುದಕ್ಕೂ ನನಗೇನೂ ಕಷ್ಟವಾಗುವುದಿಲ್ಲ. ಒಂದೊಮ್ಮೆ ರಾತ್ರಿ ಭೋಜನಕ್ಕೂ ಅವರು ನನ್ನನ್ನು ಆಹ್ವಾನಿಸಿದ್ದರು.
ನನ್ನ ಜತೆ ಮಾತ್ರವಲ್ಲ ಟಿಇಆರ್‌ಐ ನಲ್ಲಿದ್ದ ಇನ್ನಿತರ ಮಹಿಳೆಯರ ಜತೆಯೂ ಪಚೌರಿ ಅಸಭ್ಯವಾಗಿ ವರ್ತಿಸಿದ್ದರು. ನಾನು ಪೊಲೀಸರಿಗೆ ದೂರು ನೀಡಿದ್ದರೂ ಅವರ್ಯಾರೂ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ದೂರುದಾತೆ ಹೇಳಿದ್ದಾರೆ.
ಇದಕ್ಕಿಂತ ಮುನ್ನ ಟಿಇಆರ್‌ಐ ಮಾಜಿ ಉದ್ಯೋಗಿಯೊಬ್ಬರು ಪಚೌರಿ ವಿರುದ್ಧ ಇದೇ ರೀತಿಯ ಆರೋಪವನ್ನು ಹೊರಿಸಿದ್ದಾರೆ.
ಬುಧವಾರ ಪಚೌರಿ ಅವರನ್ನು ಟಿಇಆರ್‌ಐ ಯ ಎಕ್ಸಿಕ್ಯೂಟಿವ್ ಉಪಾಧ್ಯಕ್ಷರಾಗಿ ನೇಮಕ ಮಾಡಲಾಗಿತ್ತು. ಮಹಿಳೆಯರ ಈ ಆರೋಪದ ಹಿನ್ನಲೆಯಲ್ಲಿ ಪಚೌರಿ ಅವರ ವಿರುದ್ಧ ಕಾನೂನು ರೀತ್ಯಾ ಹೋರಾಟಗಳು ನಡೆಯುತ್ತಿವೆ. ಸದ್ಯ ಪಚೌರಿ ಅವರು ಜಾಮೀನು ಪಡೆದು ಬಂಧಮುಕ್ತರಾಗಿದ್ದಾರೆ.