ನವದೆಹಲಿ: ಇಂದನ ಮತ್ತು ಸಂಪನ್ಮೂಲ ಸಂಸ್ತೆಯ(ಟೆರಿ) ಕಾರ್ಯಕಾರಿ ಉಪಾಧ್ಯಕ್ಷ ಆರ್ ಕೆ ಪಚೌರಿ ಅವರನ್ನು ನೇಮಕ ಮಾಡಿದ್ದನ್ನು ವಿರೋಧಿಸಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿರುವ ಹೊತ್ತಿನಲ್ಲೇ ಪಚೌರಿ ಶುಕ್ರವಾರ ದೀರ್ಘ ರಜೆ ಮೇಲೆ ತೆರಳಿದ್ದಾರೆ.
ಮಾರ್ಚ್ 7ರಂದು ನಡೆಯಲಿರುವ ಟೆರಿ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಪಚೌರಿ ಅವರಿಂದ ಪದವಿ ಪತ್ರ ಸ್ವೀಕರಿಸುವುದಿಲ್ಲ ಎಂದು ವಿದ್ಯಾರ್ಥಿಗಳು ತಿಳಿಸಿದ್ದರು. ಅಲ್ಲದೇ, ಟೆರಿ ಕಾರ್ಯನಿರ್ವಾಹಕ ಉಪಾಧ್ಯಕ್ಷರನ್ನಾಗಿ ಪರಿಸರ ತಜ್ಞ ಆರ್ ಕೆ ಪಚೌರಿ ಅವರನ್ನು ನೇಮಕ ಮಾಡಿದ್ದನ್ನು ವಿರೋಧಿಸಿ ವಿವಿ ವಿದ್ಯಾರಥಿಗಳು ಪ್ರತಿಭಟನೆ ನಡೆಸಿದರು. ಈ ಹಿನ್ನಲೆಯಲ್ಲಿ, ಘಟಿಕೋತ್ಸವದಲ್ಲಿ ಪಾಲ್ಗೊಳ್ಳದಿರಲು ಪಚೌರಿ ತೀರ್ಮಾನಿಸಿದ್ದು, ದೀರ್ಘ ರಜೆ ಮೇಲೆ ತೆರಳಿದ್ದಾರೆ ಎಂದು ಹಂಗಾಮಿ ಕುಲಪತಿ ರಾಜೀವ್ ಸೇಥ್ ತಿಳಿಸಿದ್ದಾರೆ.
ಪಚೌರಿ ವಿರುದ್ಧ ಕೇಳಿ ಬಂದಿರುವ ಲೈಂಗಿಕ ಕಿರುಕುಳ ಆರೋಪದ ಪ್ರಕರಣವನ್ನು ನ್ಯಾಯಾಲಯದ ಆಚೆಗೆ ಬಗೆಹರಿಸುವ ಬಗ್ಗೆ ಮಾತುಕತೆ ನಡೆಸಿರುವುದಾಗಿ ದೆಹಲಿ ಪೊಲೀಸರು ಕೋರ್ಟ್ ಗೆ ಹೇಳಿದ್ದಾರೆ.
ಪಚೌರಿಗೆ ಜಾಮೀನು ರದ್ದುಗೊಳಿಸುವಂತೆ ಕೋರಿ ಲೈಂಗಿಕ ಕಿರುಕುಳ ಆರೋಪ ಹೊರಿಸಿರುವ ಮಹಿಳೆ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ಕಾಯ್ದಿರಿಸಿದೆ.