ನವದೆಹಲಿ: ಸಂಸತ್ ದಾಳಿಯ ರೂವಾರಿ ಅಫ್ಜಲ್ ಗುರುವನ್ನು ಗಲ್ಲಿಗೇರಿಸಿದ್ದನ್ನು ಖಂಡಿಸಿ ಜವಾಹರ್‍ಲಾಲ್ ನೆಹರೂ ವಿಶ್ವವಿದ್ಯಾಲಯ(ಜೆಎನ್‍ಯು)ದ ಕೆಲವು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿರುವುದನ್ನು ಕೇಂದ್ರ ಸರ್ಕಾರ ಬಲವಾಗಿ ಖಂಡಿಸಿದ್ದು, ಭಾರತ ಮಾತೆಗೆ ಅವಮಾನವಾಗುವುದನ್ನು ದೇಶ ಯಾವತ್ತೂ ಸಹಿಸಿಕೊಳ್ಳಲ್ಲ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಅವರು ಶುಕ್ರವಾರ ಹೇಳಿದ್ದಾರೆ.
ಇದಕ್ಕು ಮುನ್ನ ಭಾರತ ವಿರೋಧಿ ಚಟುವಟಿಕೆಗಳನ್ನು ಸಹಿಸಿಕೊಳ್ಳುವುದಿಲ್ಲ. ಭಾರತದ ವಿರೋಧವಾಗಿ ಘೋಷಣೆ ಕೂಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದರು.
ಸಂಸತ್ ಮೇಲೆ ದಾಳಿ ನಡೆಸಿದ ಆರೋಪಿ ಅಫ್ಜಲ್ ಗುರು ಗಲ್ಲಿಗೇರಿಸಿದ್ದನ್ನು ಖಂಡಿಸಿ, ವಿದ್ಯಾರ್ಥಿಗಳ ಗುಂಪೊಂದು ಕಾರ್ಯಕ್ರಮವೊಂದನ್ನು ಆಯೋಜಿಸಿತ್ತು. ಕಾರ್ಯಕ್ರಮದಲ್ಲಿ ಭಾರತ ವಿರೋಧಿ ಘೋಷಣೆಗಳನ್ನು ಕೂಗಲಾಗಿತ್ತು.
ಇದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ರಾಜನಾಥ್ ಸಿಂಗ್, ಭಾರತ ವಿರೋಧಿ ಘೋಷಣೆಗಳನ್ನು ಕೂಗುತ್ತಾ, ಏಕತೆಯನ್ನು ಕದಡುವವರನ್ನು ಸುಮ್ಮನೆ ಬಿಡುವುದಿಲ್ಲ. ಅಂತಹವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಅಲ್ಲದೆ ಜೆಎನ್ ಯುನಲ್ಲಿ ಕಾರ್ಯಕ್ರಮವೊಂದನ್ನು ಆಯೋಜಿಸಿ, ಭಾರತ ವಿರೋಧಿ ಚಟುವಟಿಕೆಯಲ್ಲಿ ಯಾರೆಲ್ಲ ಭಾಗವಹಿಸಿದ್ದರೋ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದು ದೆಹಲಿ ಪೊಲೀಸರಿಗೆ ರಾಜನಾಥ್ ಸಿಂಗ್ ಸೂಚಿಸಿದ್ದಾರೆ.