ದೇಶ

ಸಿಯಾಚಿನ್ ನಲ್ಲಿ ತಿಂಗಳಿಗೊಬ್ಬ ಯೋಧನ ಸಾವು; 1984ರಿಂದ 869 ಯೋಧರು ಹುತಾತ್ಮ

Srinivasamurthy VN

ನವದೆಹಲಿ: ಹನುಮಂತಪ್ಪ ಕೊಪ್ಪದ್ ಮತ್ತು ಇತರೆ 9 ಯೋಧರ ಸಾವಿನೊಂದಿಗೆ ತೀವ್ರ ಚರ್ಚೆಗೀಡಾಗಿರುವ ಸಿಯಾಚಿನ್ ಯುದ್ಧ ಭೂಮಿಯ ಮತ್ತಷ್ಟು ಅಂಶಗಳು ಹೊರಬೀಳುತ್ತಿದೆ.

ಸೇನಾ ಮೂಲಗಳು ಮತ್ತು ಅಂಕಿಅಂಶಗಳು ತಿಳಿಸಿರುವಂತೆ ವಿಶ್ವದ ಅತ್ಯಂತ ಎತ್ತರದ ಯುದ್ಧ ಭೂಮಿಯಲ್ಲಿ ನಮ್ಮ ನೂರಾರು ಸೈನಿಕರು ಪ್ರಾಣತೆತ್ತಿದ್ದಾರೆ. ಇತ್ತೀಚೆಗೆ ಕೇಂದ್ರ ಸರ್ಕಾರ ಲೋಕಸಭೆಯ  ಮುಂದಿಟ್ಟ ಅಧಿಕೃತ ಅಂಕಿಅಂಶಗಳ ಪ್ರಕಾರ ಸಿಯಾಚಿನ್ ನಲ್ಲಿ 1984ರಿಂದ ಈ ವರೆಗೂ ಬರೊಬ್ಬರಿ 869 ಮಂದಿ ಯೋಧರು ಸಾವಿಗೀಡಾಗಿದ್ದಾರೆ. ಅಂದರೆ ಸರಾಸರಿ ತಿಂಗಳಿಗೆ ಓರ್ವ ಯೋಧ  ಸಿಯಾಚಿನ್ ಯುದ್ಧ ಭೂಮಿಯಲ್ಲಿ ಸಾವನ್ನಪ್ಪುತ್ತಿದ್ದಾನೆ ಎಂದು ತಿಳಿದುಬಂದಿದೆ. 32 ವರ್ಷಗಳ ಹಿಂದೆ ಪಾಕಿಸ್ತಾನ ಸೇನೆಯನ್ನು ಹಿಮ್ಮೆಟ್ಟಿಸುವ ಸಲುವಾಗಿ ಆರಂಭಗೊಂಡ ಸಿಯಾಚಿನ್ ಕಾರ್ಯಾಚರಣೆ  ಇಂದಿಗೂ ಮುಂದುವರೆದಿದೆ.

ಸಮುದ್ರ ಮಟ್ಟದಿಂದ ಸುಮಾರು 20, 500 ಅಡಿ ಎತ್ತರದಲ್ಲಿರುವ ಕಡಿದಾದ ಯುದ್ಧ ಭೂಮಿಯಲ್ಲಿ ಕಳೆದ ಫೆಬ್ರವರಿ 3 ರಂದು ಸಂಭವಿಸಿದ ಹಿಮಪಾತದಲ್ಲಿ ಸಾವನ್ನಪ್ಪಿದ 10 ಯೋಧರು ಮತ್ತು  ಗಾಯಗೊಂಡು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಇತರೆ ಮೂವರು ಯೋಧರನ್ನು ಸೇರಿ ಈ ವರೆಗೂ ಸಿಯಾಚಿನ್ ನಲ್ಲಿ ಸಂಭವಿಸಿದ ಯೋಧರ ಸಾವಿನ ಸಂಖ್ಯೆ ಇದೀಗ 883ಕ್ಕೇರಿದೆ. ಈ ಪೈಕಿ 33 ಮಂದಿ  ಅಧಿಕಾರಿಗಳು, 54 ಮಂದಿ ಕಿರಿಯ ಕಾಮಾಂಡೆಟ್ ಅಧಿಕಾರಿಗಳು ಮತ್ತು 782 ಮಂದಿ ಇತರೆ ಶ್ರೇಣಿಯ ಸೈನಿಕರು ಎಂದು ತಿಳಿದುಬಂದಿದೆ.

2011ರಲ್ಲಿ 24 ಮಂದಿ ಸಾವನ್ನಪ್ಪಿದ್ದರೆ, 2015 ರಲ್ಲಿ 5 ಮಂದಿ ಯೋಧರು ಸಾವನ್ನಪ್ಪಿದ್ದರು. ಸಾವನ್ನಪ್ಪಿದ ಯೋಧರಾರೂ ಶತ್ರುಳ ಗುಂಡಿಗೆ ಬಲಿಯಾಗಿಲ್ಲ. ಬದಲಿಗೆ ಸಿಯಾಚಿನ್ ನಲ್ಲಿ ವಿಪರೀತ  ವಾತವರಣ ಹಾಗೂ ಹಿಮಪಾತದಿಂದಾಗಿ ಮೃತಪಟ್ಟಿದ್ದಾರೆ ಎಂದು ಕೇಂದ್ರ ಸರ್ಕಾರ ಲೋಕಸಭೆಗೆ ಸಲ್ಲಿಸಿರುವ ದಾಖಲೆಗಳಲ್ಲಿ ತಿಳಿಸಲಾಗಿದೆ. ಇನ್ನು 2012-13ರಿಂದ 2014-15 ವರ್ಷದ  ಅವಧಿಯಲ್ಲಿ ಇಲ್ಲಿನ ಸೈನಿಕರಿಗಾಗಿ ಬರೊಬ್ಬರಿ 6,566 ಕೋಟಿ ವೆಚ್ಚ ಮಾಡಲಾಗಿದ್ದು, ಸೈನಿಕರನ್ನು ಹಿಮ ಮತ್ತು ಶೀತದಿಂದ ಕಾಪಾಡುವ ವಿಶೇಷ ವಸ್ತ್ರಗಳು, ಪರ್ವತಾರೋಹಿ ಉಪಕರಣಗಳು,  ಶಸ್ತ್ರಾಸ್ತ್ರಗಳ ಖರೀದಿಗಾಗಿ ಇಷ್ಟು ವೆಚ್ಚ ಮಾಡಲಾಗಿದೆ ಎಂದು ಲೋಕಸಭೆ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

SCROLL FOR NEXT