ಜೆಎನ್ಯು ವಿವಾದ: ರಾಹುಲ್ ಉಗ್ರ ಹಫೀಸ್ ಸಯ್ಯೀದ್ ನಂತೆ ಮಾತನಾಡುತ್ತಿದ್ದಾರೆ; ಬಿಜೆಪಿ
ಜೆಎನ್ಯು ವಿವಾದ ದಿನದಿಂದ ದಿನಕ್ಕೆ ತಾರಕ್ಕೇರುತ್ತಿದ್ದು, ಪ್ರಕರಣವೀಗ ರಾಜಕೀಯ ಬಣ್ಣಕ್ಕೆ ತಿರುಗಿದೆ. ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಎಲ್ಇಟಿ ಉಗ್ರ ಹಫೀಜ್ ಸಯ್ಯೀದ್ ನಂತೆ ಮಾತನಾಡುತ್ತಿದ್ದಾರೆಂದು ಬಿಜೆಪಿ ಶನಿವಾರ ಹೇಳಿದೆ...
ನವದೆಹಲಿ: ಜೆಎನ್ಯು ವಿವಾದ ದಿನದಿಂದ ದಿನಕ್ಕೆ ತಾರಕ್ಕೇರುತ್ತಿದ್ದು, ಪ್ರಕರಣವೀಗ ರಾಜಕೀಯ ಬಣ್ಣಕ್ಕೆ ತಿರುಗಿದೆ. ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಎಲ್ಇಟಿ ಉಗ್ರ ಹಫೀಜ್ ಸಯ್ಯೀದ್ ನಂತೆ ಮಾತನಾಡುತ್ತಿದ್ದಾರೆಂದು ಬಿಜೆಪಿ ಶನಿವಾರ ಹೇಳಿದೆ.
ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯ (ಜೆಎನ್ಯು)ದಲ್ಲಿ ವಿದ್ಯಾರ್ಥಿಗಳ ಕೆಲವು ಸಂಘಟನೆಗಳು ರಾಷ್ಟ್ರ ವಿರೋಧಿ ಘೋಷಣೆ ಕೂಗಿ ನಡೆಸುತ್ತಿರುವ ಪ್ರತಿಭಟನೆಗೆ ದೇಶದಾದ್ಯಂತ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದರೂ ಕಾಂಗ್ರೆಸ್ ಮತ್ತು ವಿರೋಧ ಪಕ್ಷಗಳು ಮಾತ್ರ ಅದಕ್ಕೆ ಬೆಂಬಲ ಸೂಚಿಸಿ ಮೋದಿ ಸರ್ಕಾರವನ್ನು ಗುರಿಯಾಗಿರಿಸಿಕೊಂಡು ದಾಳಿ ಮಾಡುತ್ತಿದ್ದಾರೆ. ಉಗ್ರ ಹಫೀಜ್ ಸಯ್ಯೀದ್ ದೇಶ ವಿರೋಧಿ ಘೋಷಣೆ ಕೂಗುತ್ತಾ ವಿದ್ಯಾರ್ಥಿಗಳು ಮಾಡುತ್ತಿರುವ ಪ್ರತಿಭಟನೆಗೆ ಟ್ವಿಟರ್ ಮೂಲಕ ಬೆಂಬಲ ವ್ಯಕ್ತಪಡಿಸಿದ್ದ. ಇದೀಗ ರಾಹುಲ್ ಗಾಂಧಿ ಅವರ ಗೆಳೆಯರು ಕೂಡ ಎಲ್ಇಟಿ ಉಗ್ರ ಹಫೀಜ್ ಸಯ್ಯೀದ್ ನಂತೆ ಮಾತನಾಡುತ್ತಿದ್ದಾರೆ. ಇದು ನಿಜಕ್ಕೂ ಹುತಾತ್ಮರಾದ ಯೋಧರಿಗೆ ಅವಮಾನ ಮಾಡಿದಂತಾಗಿದೆ.
ಜೆಎನ್ ಯು ದೇಶ ವಿರೋಧಿ ಬುದ್ಧಿಜೀವಿಗಳು ಮತ್ತು ಅಧಿಕಾರಿಗಳನ್ನು ಹೊರತರುತ್ತಿದ್ದು, ಅವರೇ ಈ ರೀತಿಯ ದೇಶ ವಿರೋಧಿ ಘೋಷಣೆಗಳು ಹಾಗೂ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಕಾಂಗ್ರೆಸ್ ನಾಯಕರೇ ರಾಜಕೀಯ ಕಾರಣಕ್ಕಾಗಿ ದೇಶಕ್ಕಾಗಿ ಪ್ರಾಣತೆತ್ತ ನಮ್ಮ ಯೋಧರಿಗೆ ಅವಮಾನ ಮಾಡದಿರಿ ಎಂದು ಆಗ್ರಹಿಸಿದೆ.
ಸಂಸತ್ ಮೇಲೆ ದಾಳಿ ನಡೆಸಿದ ಆರೋಪಿ ಅಫ್ಜಲ್ ಗುರು ಗಲ್ಲಿಗೇರಿಸಿದ್ದನ್ನು ಖಂಡಿಸಿದ್ದಲ್ಲದೆ ಇದೊಂದು ಜ್ಯುಡಿಶಿಯಲ್ ಕಿಲ್ಲಿಂಗ್ ಎಂದು ಆರೋಪಿಸಿ ವಿದ್ಯಾರ್ಥಿಗಳ ಗುಂಪೊಂದು ಕಾರ್ಯಕ್ರಮವೊಂದನ್ನು ಫೆಬ್ರವರಿ 9ರಂದು ವಿವಿಯಲ್ಲಿ ಆಯೋಜಿಸಿತ್ತು. ಕಾರ್ಯಕ್ರಮದಲ್ಲಿ ಅಫ್ಜಲ್ ಗುರು ಪರ ಹಾಗೂ ಭಾರತ ವಿರೋಧಿ ಘೋಷಣೆಗಳನ್ನು ಕೂಗಿತ್ತು. ಇದಕ್ಕೆ ಕಾಶ್ಮೀರಿ ವಲಸಿಗರ ಹಾಗೂ ಆಜಾದ್ ಕಾಶ್ಮೀರಿ ಪರ ವಿದ್ಯಾರ್ಥಿಗಳ ಗುಂಪು ಸಹಮತ ವ್ಯಕ್ತಪಡಿಸಿತ್ತು.
ನಂತರ ಈ ವಿಷಯವಿವಿ ಗಮನಕ್ಕೆ ಬಂದಿತ್ತು. ಕಾಲೇಜು ಕ್ಯಾಂಪಸ್ ನ ಶಾಂತಿ ವಾತಾವರಣ ಹಾಳಾಗುತ್ತೆ ಎಂಬ ನಿಟ್ಟಿನಲ್ಲಿ ಅಫ್ಜಲ್ ಗುರುವನ್ನು ಬೆಂಬಲಿಸಿ ಯಾವುದೇ ಕಾರ್ಯಕ್ರಮ ನಡೆಸಲು ಯೂನಿರ್ವಸಿಟಿಯ ಆಡಳಿತ ಮಂಡಳಿ ಪರವಾನಿಗೆ ಕೊಟ್ಟಿರಲಿಲ್ಲ. ಆದರೆ ವಿದ್ಯಾರ್ಥಿ ಸಂಘಟಕರು ಅಫ್ಜಲ್ ಗುರು ಜ್ಯುಡಿಶಿಯಲ್ ಹತ್ಯೆಯನ್ನು ಖಂಡಿಸಿ ನಡೆಸುತ್ತಿರುವ ಪ್ರತಿಭಟನಾ ಮೆರವಣಿಗೆ ಬನ್ನಿ ಎಂದು ಆಹ್ವಾನಿಸಿ ಕ್ಯಾಂಪಸ್ ಸುತ್ತಮುತ್ತ ಪೋಸ್ಟರ್ ಗಳನ್ನು ಅಂಟಿಸಿದ್ದರು.
ಆದರೆ, ಯೂನಿರ್ವಸಿಟಿಯೊಳಗೆ ಈ ರೀತಿಯ ಕಾರ್ಯಕ್ರಮ ನಡೆಸೋದಕ್ಕೆ ಬಿಜೆಪಿಯ ಅಂಗಸಂಸ್ಥೆಯಾದ ಎಬಿವಿಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಉಪಕುಲಪತಿಗೆ ದೂರು ನೀಡಿತ್ತು. ಇದನ್ನು ತಿಳಿದ ಮತ್ತೊಂದು ವಿದ್ಯಾರ್ಥಿ ಗುಂಪು ನಾವು ಕಾರ್ಯಕ್ರಮ ನಡೆಸಿಯೇ ತೀರುತ್ತೇವೆಂದು ಎಂದು ಸೆಡ್ಡು ಹೊಡೆದಿತ್ತು. ನಂತರ ಎಬಿವಿಪಿ ಬೆಂಬಲಿಗರು ಪ್ರತಿಭಟನೆ ನಡೆಸಿದ್ದರು. ಎರಡೂ ವಿದ್ಯಾರ್ಥಿ ಸಂಘಟನೆಗಳು ವಿವಿಯಲ್ಲಿ ಪ್ರತಿಭಟನೆ ನಡೆಸಿದ್ದವು.
ಹೀಗಾಗಿ ವಿವಿ ಆಡಳಿತ ಮಂಡಳಿಯು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕಾಗಮಿಸಿದ್ದ ಪೊಲೀಸರು ದೇಶದ್ರೋಹದ ಆರೋಪದ ಮೇಲೆ ಜವಾಹರ್ಲಾಲ್ ನೆಹರೂ ವಿಶ್ವವಿದ್ಯಾಲಯ(ಜೆಎನ್ಯು)ದ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯ ಕುಮಾರ್ ಅವರನ್ನು ಬಂಧನಕ್ಕೊಳಪಡಿಸಿದ್ದರು. ಅಲ್ಲದೆ, ಪಟಿಯಾಲ ಹೌಸ್ ಕೋರ್ಟ್ ಗೆ ಹಾಜರು ಪಡಿಸಿದರು. ವಿಚಾರಣೆ ನಡೆಸಿದ ಕೋರ್ಟ್, ಆರೋಪಿಯನ್ನು ಮೂರು ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಿತ್ತು. ನಂತರ ಪ್ರಕರಣ ಸಂಬಂದ ತನಿಖೆ ನಡೆಸಿದ್ದ ವಿವಿ ಶಿಸ್ತು ಸಮಿತಿಯಿಂದ ಬಂದ ಮಧ್ಯಂತರ ವರದಿ ಪಡೆದುಕೊಂಡು ಎಂಟು ವಿದ್ಯಾರ್ಥಿಗಳ ವಿರುದ್ಧ ಶೈಕ್ಷಣಿಕ ಚಟುವಟಿಕೆಯಲ್ಲಿ ಭಾಗವಹಿಸದಂತೆ ನಿಷೇಧ ಹೇರಿತ್ತು. ಇದಕ್ಕೆ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆಗಿಳಿದಿತ್ತು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.