ಪಟನಾ: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿರುವ ಆರ್ಜೆಡಿ ಶಾಸಕ ರಾಜ್ಬಲ್ಲಬ್ ಯಾದವ್ ಅವರನ್ನು ಭಾನುವಾರ ಪಕ್ಷದಿಂದ ಅಮಾನತುಗೊಳಿಸಲಾಗಿದೆ.
ಪ್ರಕರಣದಿಂದ ತೀವ್ರ ಮುಜುಗರಕ್ಕೆ ಒಳಗಾಗಿದ್ದ ಬಿಹಾರ ಮೈತ್ರಿಕೂಟ ಕಡೆಗೂ ಈ ನಿರ್ಧಾರಕ್ಕೆ ಬಂದಿದೆ. ಈ ಬೆಳವಣಿಗೆಯಿಂದ ಈಗ ರಾಜ್ಬಲ್ಲಬ್ ಯಾದವ್ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ.
ರಾಜ್ ಬಲ್ಲಭ್ ಯಾದವ್ ಅವರು ನವಾಡ ಕ್ಷೇತ್ರದಿಂದ ಆರ್ ಜೆಡಿ ಶಾಸಕರಾಗಿ ಆಯ್ಕೆಯಾಗಿದ್ದರು. ಈ ಹಿಂದೆ ಆರ್ ಜೆಡಿ ಸರ್ಕಾರದಲ್ಲಿ ಸಚಿವರೂ ಆಗಿ ಕಾರ್ಯನಿರ್ವಹಿಸಿದ್ದರು. ಇದೀಗ ಅವರ ವಿರುದ್ಧ ಗಂಭೀರ ಆರೋಪವೊಂದು ಕೇಳಿಬಂದಿದ್ದು, ಈ ಬಗ್ಗೆ ಈವರೆಗೂ ಅವರು ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಅಪ್ರಾಪ್ತ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣ ಇದಾಗಿರುವ ಕಾರಣ ಕಳೆದ ರಾತ್ರಿಯೇ ಆರೋಪಿ ರಾಜ್ಬಲ್ಲಬ್ ಯಾದವ್ ಅವರನ್ನು ಬಂಧಿಸಲು ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ. ಅಷ್ಟಕ್ಕೂ ಈ ಪ್ರಕರಣ ಕಳೆದವಾರವೇ ನಡೆದಿದ್ದು, ಅಂತಿಮವಾಗಿ ಶಾಸಕರ ಕಾಲ್ಬುಡಕ್ಕೆ ಬಂದು ನಿಂತಿದೆ.
ನವಾಡ ಮೂಲದ 15 ವರ್ಷದ ಬಾಲಕಿಯೊಬ್ಬಳು ಫೆ.6ರಂದು ತನ್ನ ಮೇಲೆ ಅತ್ಯಾಚಾರವಾಗಿದೆ ಎಂದು ಆರೋಪಿಸಿ ನಳಂದಾ ಜಿಲ್ಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ಇದರಂತೆ ತನಿಖೆ ನಡೆಸಿದ್ದ ಪೊಲೀಸರು ಬಾಲಕಿ ನೀಡಿದ ಮಾಹಿತಿ ಆಧಾರದ ಮೇಲೆ ಶಾಸಕ ರಾಜ್ ಬಲ್ಲಬ್ ಯಾದವ್ ಅವರ ಫೋಟೋವನ್ನು ಬಾಲಕಿಗೆ ತೋರಿಸಿದ್ದರು. ಈ ವೇಳೆ ಬಾಲಕಿ ಶಾಸಕನೇ ಅತ್ಯಾಚಾರ ಮಾಡಿದ್ದ ಎಂದು ಆರೋಪಿಸಿದ್ದಾಳೆ.
ಅತ್ಯಾಚಾರ ನಡೆದ ಬಳಿಕ 30,000 ಕೈಗಿಟ್ಟು ಬಾಲಕಿಯನ್ನು ಮನೆಗೆ ಕಳುಹಿಸಲಾಗಿತ್ತು. ಬಾಲಕಿ ನಡೆದ ಘಟನೆಯನ್ನೆಲ್ಲ ಪೋಷಕರ ಬಳಿ ಹೇಳಿಕೊಂಡಿದ್ದಾಳೆ. ಬಳಿಕ ಪೋಷಕರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಬಾಲಕಿ ನೀಡುತ್ತಿರುವ ಮಾಹಿತಿ ಮೇರೆಗೆ ತನಿಖೆ ನಡೆಸಿದಾಗ ಅತ್ಯಾಚಾರ ನಡೆಸಿರುವುದು ಶಾಸಕ ಎನ್ನುವ ಅಂಶ ಬೆಳಕಿಗೆ ಬಂದಿದೆ. ಇದೀಗ ಇಡೀ ಪ್ರಕರಣ ಹೆಚ್ಚಿನ ಮಹತ್ವ ಪಡೆದುಕೊಂಡಿದೆ.
ಫೆಬ್ರವರಿ 9ರಂದು ಬಾಲಕಿ ಹೇಳಿಕೆಯನ್ನಾಧರಿಸಿ ಐಪಿಸಿ ಸೆಕ್ಷನ್ 164ರ ಪ್ರಕಾರ ಯಾದವ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಬಂಧನಕ್ಕೆ ಮುಂದಾಗಿದ್ದಾರೆ.