ನವದೆಹಲಿ: ಮಾಜಿ ಸ್ವಾತಂತ್ರ್ಯ ಸೇನಾನಿ ಸುಭಾಷ್ ಚಂದ್ರ ಬೋಸ್ ಅವರಿಗೆ ಸಂಬಂಧಪಟ್ಟ ದಾಖಲೆಗಳನ್ನೊಳಗೊಂಡ ಮತ್ತೆ 25ರಹಸ್ಯ ದಾಖಲೆಗಳನ್ನು ಕೇಂದ್ರ ಸರ್ಕಾರ ಇದೇ 23ರಂದು ಬಿಡುಗಡೆ ಮಾಡಲಿದೆ ಎಂದು ಕೇಂದ್ರ ಸಂಸ್ಕೃತಿ ಸಚಿವ ಮಹೇಶ್ ಶರ್ಮ ತಿಳಿಸಿದ್ದಾರೆ.
ನಾವು ಪ್ರತಿ ತಿಂಗಳು 23ನೇ ತಾರೀಖಿನಂದು ನೇತಾಜಿಯವರಿಗೆ ಸಂಬಂಧಪಟ್ಟ 25 ರಹಸ್ಯ ದಾಖಲೆಗಳನ್ನು ಬಿಡುಗಡೆ ಮಾಡುತ್ತೇವೆ. ಅದಕ್ಕೆ ಸರ್ಕಾರ ಸಿದ್ಧತೆ ಮಾಡಿಕೊಂಡಿದೆ ಎಂದು ಅವರು ಹೇಳಿದ್ದಾರೆ.
ಸುಭಾಷ್ ಚಂದ್ರ ಬೋಸ್ ಅವರ ಬಗೆಗಿನ ದಾಖಲೆಗಳ ಡಿಜಿಟಲ್ ಸಂಗ್ರಹವನ್ನು ಪ್ರತಿ ತಿಂಗಳು ಭಾರತ ರಾಷ್ಟ್ರೀಯ ಸಾವ೯ಜನಿಕ ದಫ್ತರ ಖಾನೆ ಬಿಡುಗಡೆ ಮಾಡಲಾಗುತ್ತದೆ ಎಂದು ಕೇಂದ್ರ ಸರ್ಕಾರ ಈ ಹಿಂದೆ ತಿಳಿಸಿತ್ತು.
ಕಳೆದ ತಿಂಗಳು 23ರಂದು ಪ್ರಧಾನಿ ನರೇಂದ್ರ ಮೋದಿಯವರು ನೇತಾಜಿಯವರ 119ನೇ ಜನ್ಮ ದಿನಾಚರಣೆ ಸಂದರ್ಭದಲ್ಲಿ ಸುಮಾರು 100 ದಾಖಲೆಗಳನ್ನು ಬಿಡುಗಡೆ ಮಾಡಿದ್ದರು. ಅದು 16 ಸಾವಿರದ 600 ಪುಟಗಳನ್ನು ಒಳಗೊಂಡಿತ್ತು. ಬ್ರಿಟಿಷ್ ಆಡಳಿತದಿಂದ ಆರಂಭವಾಗಿ 2007ರ ತನಕದ ವಿಷಯಗಳು ಅದರಲ್ಲಿದ್ದವು.