ನವದೆಹಲಿ: ದೆಹಲಿ ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮಾಡುವಂತೆ ರಾಷ್ಟ್ರೀಯ ತನಿಖಾ ದಳವನ್ನು ಕೇಳಿಲ್ಲ ಎಂದು ದೆಹಲಿ ಪೊಲೀಸ್ ಆಯುಕ್ತ ಬಿಎಸ್ ಬಸ್ಸಿ ಹೇಳಿದ್ದಾರೆ.
ಜೆಎನ್ ಯು ವಿವಿಯಲ್ಲಿ ನಡೆದ ಹಿಂಸಾಚಾರದಲ್ಲಿ ಉಗ್ರರ ಕೈವಾಡದ ಕುರಿತು ಎದ್ದಿರುವ ಊಹಾಪೋಹಗಳಿಂದಾಗಿ ಪ್ರಕರಣವನ್ನು ದೆಹಲಿ ಪೊಲೀಸರು ಎನ್ಐಎಗೆ ವರ್ಗಾವಣೆ ಮಾಡುವ ಕುರಿತು ಚಿಂತನೆ ನಡೆಸಿದ್ದಾರೆ ಎಂಬ ವರದಿಗಳು ಪ್ರಸಾರವಾದಿ ಹಿನ್ನಲೆಯಲ್ಲಿ ಇಂದು ದೆಹಲಿಯಲ್ಲಿ ಬಸ್ಸಿ ಅವರು ಸ್ಪಷ್ಟನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ಪ್ರಕರಣವನ್ನು ತನಿಖೆ ಮಾಡುವಂತೆ ತಾವು ರಾಷ್ಟ್ರೀಯ ತನಿಖಾ ದಳವನ್ನು ಕೇಳಿಲ್ಲ. ದೆಹಲಿ ಪೊಲೀಸ್ ಠಾಣೆಗಳಲ್ಲಿ ದಾಖಲಾದ ಎಲ್ಲ ಪ್ರಕರಣಗಳನ್ನು ತನಿಖೆ ಮಾಡಲು ದೆಹಲಿ ಪೊಲೀಸರು ಶಕ್ತ್ಯರಾಗಿದ್ದಾರೆ ಎಂದು ಹೇಳಿದರು.
ಇದೇ ವೇಳೆ ಎನ್ಐಎ ಪಾತ್ರದ ಕುರಿತು ಮಾತನಾಡಿದ ಬಸ್ಸಿ ಅವರು, ಎನ್ಐಎ ಕಾಯ್ದೆ ಸೆಕ್ಷನ್ 24 ಮತ್ತು 144 ಎ ಅಡಿಯಲ್ಲಿ ಪ್ರಕರಣ ದಾಖಲಾದ್ದರಿಂದ ಈ ಕುರಿತು ರಾಷ್ಟ್ರೀಯ ತನಿಖಾ ದಳಕ್ಕೆ ಮಾಹಿತಿ ನೀಡುವುದು ನಮ್ಮ ಕರ್ತವ್ಯವಾಗಿದ್ದು, ಅದನ್ನು ನಾವು ಮಾಡಿದ್ದೇವೆ. ಕೇಂದ್ರ ಸರ್ಕಾರದ ಮೂಲಕ ಎನ್ಐಎ ಅಧಿಕಾರಿಗಳಿಗೆ ವರದಿ ನೀಡಬೇಕಿದ್ದು, ಆ ಬಗ್ಗೆ ಕ್ರಮ ಕೈಗೊಂಡಿದ್ದೇವೆ. ಇನ್ನು ಈ ಪ್ರಕರಣದ ತನಿಖೆ ಮಾಡುವ ಕುರಿತು ರಾಷ್ಟ್ರೀಯ ತನಿಖಾ ದಳವೇ ನಿರ್ಧಾರ ಕೈಗೊಳ್ಳಬೇಕು ಎಂದು ಬಸ್ಸಿ ಸ್ಪಷ್ಟಪಡಿಸಿದರು.