ಜೆಎನ್ ಯು ಪ್ರಕರಣಕ್ಕೆ ಕೋಮು ಬಣ್ಣ ಬಳಿಯುತ್ತಿರುವ ರಾಜನಾಥ್ ಸಿಂಗ್: ಮನೀಷ್ ತಿವಾರಿ ಆರೋಪ
ನವದೆಹಲಿ: ಜೆಎನ್ ಯು ಪ್ರಕರಣ ಇದೀಗ ರಾಜಕೀಯ ನಾಯಕರ ನಡುವಿನ ಕೆಸರೆರಚಾಟಕ್ಕೆ ಕಾರಣವಾಗಿದ್ದು, ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಪ್ರಕರಣಕ್ಕೆ ಕೋಮು ಬಣ್ಣ ಬಳಿಯುವ ಪ್ರಯತ್ನ ಮಾಡುತ್ತಿದ್ದಾರೆಂದು ಕಾಂಗ್ರೆಸ್ ಸೋಮವಾರ ಆರೋಪಿಸಿದೆ.
ನಿನ್ನೆಯಷ್ಟೇ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಜೆಎನ್ ಯು ಪ್ರಕರಣ ಸಂಬಂಧ ಹೇಳಿಕೆಯೊಂದನ್ನು ನೀಡಿದ್ದರು. ಜೆಎನ್ ಯು ಪ್ರತಿಭಟನೆ ಹಿಂದೆ ಉಗ್ರ ಹಫೀಜ್ ಸಯೀದ್ ಇದ್ದಾನೆ. ದೇಶದ್ರೋಹ ಚಟುವಟಿಕೆಯಲ್ಲಿ ಭಾಗಿಯಾಗುವವರನ್ನು ಯಾವುದೇ ಕಾರಣಕ್ಕೂ ಕ್ಷಮಿಸುವುದಿಲ್ಲ ಎಂದು ಹೇಳಿದ್ದರು.
ಈ ಹೇಳಿಕೆ ವಿರುದ್ಧ ಟ್ವಿಟರ್ ನಲ್ಲಿ ಕಿಡಿಕಾರಿರುವ ಕಾಂಗ್ರೆಸ್ ಹಿರಿಯ ನಾಯಕ ಮನೀಷ್ ತಿವಾರಿ ಅವರು, ರಾಜನಾಥ ಸಿಂಗ್ ಅವರು ಪ್ರಕರಣಕ್ಕೆ ಕೋಮು ಬಣ್ಣ ಬಳಿಯುತ್ತಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಲಷ್ಕರ್-ಇ-ತೊಯ್ಬಾ ಮುಖ್ಯಸ್ಥನನ್ನು ಬಂಧಿಸುವ ಕುರಿತಂತೆ ಪಾಕಿಸ್ತಾನ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಬೇಕಿದೆ ಎಂದು ಹೇಳಿದ್ದಾರೆ.
ಇದರಂತೆ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್ ಸಿಂಗ್ ಅವರು ಕೂಡ ರಾಜನಾಥ್ ಸಿಂಗ್ ಅವರ ಹೇಳಿಕೆ ವಿರುದ್ಧ ಕಿಡಿಕಾರಿದ್ದಾರೆ. ಗೃಹ ಸಚಿವರು ಯಾವ ಮೂಲಗಳಿಂದ ಹಾಗೂ ಯಾವ ಇಲಾಖೆ ಮಾಹಿತಿಯನ್ನು ಪಡೆದುಕೊಂಡಿದ್ದಾರೆಂಬುದನ್ನು ಸ್ಪಷ್ಟಪಡಿಸಬೇಕು. ಜೆಎನ್ ಯು ಪ್ರಕರಣಕ್ಕೂ ಉಗ್ರ ಹಫೀಜ್ ಸಯ್ಯೀದ್ ಗೂ ನಂಟಿದೆ ಎಂದು ಹೇಳುತ್ತಿರುವ ಗೃಹ ಸಚಿವರು ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಟ್ವಿಟರ್ ನಲ್ಲಿ ಆಗ್ರಹಿಸಿದ್ದಾರೆ.
ಗೃಹ ಸಚಿವರ ಹೇಳಿಕೆಗೆ ವಿಪಕ್ಷಗಳು ಕಿಡಿಕಾರುತ್ತಿರುವ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿರುವ ಗೃಹ ಸಚಿವಾಲಯದ ವಕ್ತಾರ, ಪ್ರಕರಣ ಸಂಬಂಧ ಗೃಹ ಸಚಿವರಿಗೆ ವಿವಿಧ ಇಲಾಖೆಗಳಿಂದ ಮಾಹಿತಿಗಳು ಬಂದಿತ್ತು. ಈ ಹಿನ್ನೆಲೆಯಲ್ಲಿಯೇ ಅವರು ಈ ರೀತಿಯ ಹೇಳಿಕೆಯನ್ನು ನೀಡಿದ್ದಾರೆಂದು ಹೇಳಿದ್ದಾರೆ.