ದೇಶ

ಹಿಂಸಾಚಾರಕ್ಕೆ ತಿರುಗಿದ ಪುಲ್ವಾಮ ಪ್ರತಿಭಟನೆ: ಗೋಲಿಬಾರ್ ನಲ್ಲಿ ಇಬ್ಬರ ಸಾವು

Srinivasamurthy VN

ಶ್ರೀನಗರ: ಉಗ್ರರ ಎನ್ ಕೌಂಟರ್ ವಿರೋಧಿಸಿ ಸ್ಥಳೀಯರು ನಡೆಸುತ್ತಿದ್ದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ಪರಿಣಾಮ ಪೊಲೀಸರು ನಡೆಸಿದ ಗೋಲಿಬಾರ್ ನಲ್ಲಿ ಇಬ್ಬರು ಸ್ಥಳೀಯರು  ಮೃತಪಟ್ಟ ಘಟನೆ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ನಡೆದಿದೆ.

ಘಟನೆಯಲ್ಲಿ ನಾಲ್ಕು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಘಟನಾ ಸ್ಥಳದಲ್ಲಿ ಪ್ರಸ್ತುತ  ಪ್ರಕ್ಷುಬ್ಧ ವಾತಾವರಣ ನೆಲೆಸಿದೆ. ಘಟನೆಯಲ್ಲಿ ಸ್ಥಳೀಯ ಮಹಿಳೆ ಶೈಷ್ಟಾ ಮತ್ತು 19 ವರ್ಷದ ಯುವಕ  ದನೀಷ್ ಎಂಬಾತ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ. ಇಬ್ಬರೂ ಪುಲ್ವಾಮ ಜಿಲ್ಲೆಯ ನಿವಾಸಿಗಳಾಗಿದ್ದು, ಅವರ ಸೊಂಟದಲ್ಲಿ ಗುಂಡೇಟಿನ ಗಾಯಗಳಾಗಿವೆ ಎಂದು ವೈದ್ಯರು  ತಿಳಿಸಿದ್ದಾರೆ.

ಈ ಹಿಂದೆ ಕಾಕ್ ಪೋರಾದಲ್ಲಿ ನುಸುಳಿದ್ದ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸಿದ್ದ ಭದ್ರತಾ ಪಡೆಗಳು ಓರ್ವ ಉಗ್ರನನ್ನು ಹೊಡೆದುರುಳಿಸಿದ್ದರು. ಈ ವಿಚಾರ ತಿಳಿಯುತ್ತಿದ್ದಂತೆಯೇ  ಪುಲ್ವಾಮಜಿಲ್ಲೆಯಲ್ಲಿ ಸ್ಥಳೀಯರು ಕಳೆದ ಶನಿವಾರದಿಂದ ಪ್ರತಿಭಟನೆ ನಡೆಸಿದ್ದರು. ನಿನ್ನೆ ಸ್ಥಳೀಯರ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಕೆಲ ಕಿಡಿಗೇಡಿಗಳು ಭದ್ರತಾ ಪಡೆಗಳು ಮತ್ತು  ಪೊಲೀಸರತ್ತ ಕಲ್ಲು ತೂರಾಟ ನಡೆಸಿದ್ದರು. ಹೀಗಾಗಿ ಅನಿವಾರ್ಯವಾಗಿ ಭದ್ರತಾ ಪಡೆಗಳು ಗೋಲಿಬಾರ್ ನಡೆಸಬೇಕಾಗಿ ಬಂತು ಎಂದು ಮೂಲಗಳು ತಿಳಿಸಿವೆ.

ಇನ್ನು ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಪಿಡಿಪಿ ಮುಖ್ಯಸ್ಥೆ, ಘಟನೆ ದುರದೃಷ್ಟಕರ ಎಂದು ಹೇಳಿದ್ದಾರೆ.

SCROLL FOR NEXT