ನವದೆಹಲಿ: ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿರುವ ಇಸ್ರೇಲ್ ಸೇನಾಪಡೆಯ ಶಸ್ತ್ರಾಸ್ತ್ರಗಳು ಇನ್ನು ಮುಂದೆ ಭಾರತದಲ್ಲಿ ತಯಾರಾಗಲಿದೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ಇಸ್ರೇಲ್ ಸೇನಾಪಡೆಗೆ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡುವ ಇಸ್ರೇಲ್ ವೆಪನ್ ಇಂಡಸ್ಟ್ರೀ (ಐಡಬ್ಲ್ಯೂಐ) ಭಾರತ ಮೂಲದ ಶಸ್ತ್ರಾಸ್ತ್ರ ತಯಾರಿಕಾ ಸಂಸ್ಥೆಯೊಂದಿಗೆ ಜಂಟಿ ಒಪ್ಪಂದಕ್ಕೆ ಸಹಿ ಹಾಕಿದೆ. 51:49 ಅನುಪಾತದಲ್ಲಿ ಉಭಯ ಸಂಸ್ಥೆಗಳು ಒಪ್ಪಂದಕ್ಕೆ ಸಹಿಹಾಕಿದ್ದು, ಅದರಂತೆ ಇನ್ನು ಮುಂದೆ ಇಸ್ರೇಲ್ ಸೇನಾಪಡೆಗೆ ನೀಡಲಾಗುವ ಎಲ್ಲ ರೀತಿಯ ಗನ್ ಗಳು ಭಾರತದಲ್ಲೇ ತಯಾರಾಗಲಿವೆ ಎಂದು ಹೇಳಲಾಗುತ್ತಿದೆ. ಐಡಬ್ಲ್ಯೂಐ ಭಾರತೀಯ ಸೇನಾಪಡೆಗೂ ತವೋರ್ ಅಸಾಲ್ಟ್ ರೈಫಲ್ಸ್ (TAVOR assault rifles) ಮತ್ತು UZI SMG ರೈಫಲ್ ಗಳನ್ನು ಪೂರೈಕೆ ಮಾಡುತ್ತಿದ್ದು, ಇನ್ನು ಮುಂದೆ ಇಂತಹ ವೆಪನ್ ಗಳ ಶೇ.90ರಷ್ಟು ಬಿಡಿಭಾಗಗಳು ಭಾರತದಲ್ಲಿಯೇ ತಯಾರಾಗಲಿವೆ.
ಪ್ರಸ್ತುತ ಇಸ್ರೇಲ್ ಮತ್ತು ಭಾರತದ ಶಸ್ತ್ರಾಸ್ತ್ರ ತಯಾರಿಕಾ ಸಂಸ್ಥೆಗಳ ಒಪ್ಪಂದದಿಂದಾಗಿ ಇಸ್ರೇಲ್ ನ ಅತ್ಯಾಧುನಿಕ ಶಸ್ತ್ರಾಸ್ತ್ರಗಳ ತಾಂತ್ರಿಕತೆ ಭಾರತಕ್ಕೂ ಕಾಲಿಡಲಿದೆ. "ಐಡಬ್ಲ್ಯೂಐ ಸಂಸ್ಥೆಯೊಂದಿಗಿನ ಒಪ್ಪಂದದಿಂದಾಗಿ ಇಸ್ರೇಲ್ ನ ಮುಂದುವರೆದ ಶಸ್ತ್ರಾಸ್ತ್ರ ತಂತ್ರಜ್ಞಾನ ಇನ್ನು ಭಾರತಕ್ಕೆ ಲಭ್ಯವಾಗಲಿದೆ ಎಂಬ ವಿಶ್ವಾಸ ತಮಗಿದೆ. ಪಂಜ್ ಲಾಯ್ಡ್ ಸಂಸ್ಥೆ ಐಡಬ್ಲ್ಯೂಐನ ಎಲ್ಲ ರೀತಿಯ ಶಸ್ತ್ರಾಸ್ತ್ರಗಳನ್ನು ಭಾರತದಲ್ಲಿ ತಯಾರಿಸುವ ಸಾಮರ್ಥ್ಯ ಹೊಂದಿದ್ದು, ಸಣ್ಣ ಪ್ರಮಾಣದ ಪಿಸ್ತೂಲ್ ನಿಂದ ಹಿಡಿದು ಮಧ್ಯಮ ಪ್ರಮಾಣದ ಮಿಷಿನ್ ಗನ್ ಗಳವರೆಗೂ ಎಲ್ಲ ರೀತಿಯ ಶಸ್ತ್ರಾಸ್ತ್ರಗಳನ್ನು ಇನ್ನು ಭಾರತದಲ್ಲಿ ತಯಾರಿಸಬಹುದಾಗಿದೆ. ಇದಲ್ಲದೆ ಸ್ನೈಪರ್ ರೈಫಲ್ ತಂತ್ರಜ್ಞಾನದಲ್ಲಿ ನುರಿತರಾಗಿರುವ ಇಸ್ರೇಲ್ ಶಸ್ತ್ರಾಸ್ತ್ರ ತಜ್ಞರು ಕೂಡ ಭಾರತಕ್ಕೆ ಬಂದು ಸಲಹೆ ನೀಡಲಿದ್ದಾರೆ" ಎಂದು ಪಂಜ್ ಲಾಯ್ಡ್ ಸಂಸ್ಥೆಯ ನಿರ್ದೇಶಕ ಅಟುಲ್ ಪಂಜ್ ಹೇಳಿದ್ದಾರೆ.
ಇನ್ನು ಉಧ್ಯಮ ಮೂಲಗಳ ಪ್ರಕಾರ ಉಭಯ ಸಂಸ್ಥೆಗಳು ಮಾಡಿಕೊಂಡಿರುವ ಒಪ್ಪಂದದ ಅಂದಾಜು ಮೌಲ್ಯ ಸುಮಾರು 3 ಸಾವಿರ ಕೋಟಿಗೂ ಅಧಿಕವಾಗಿದ್ದು, ಸಣ್ಣ ಮತ್ತು ಮಧ್ಯಮ ಪ್ರಮಾಣ ಶಸ್ತ್ರಾಸ್ತ್ರಗಳನ್ನು ಉತ್ಪಾದನೆ ಮಾಡುತ್ತಿದ್ದ ಪಂಜ್ ಲಾಯ್ಡ್ ಸಂಸ್ಥೆ ಹಾಲಿ ಒಪ್ಪಂದದಿಂದಾಗಿ ದೊಡ್ಡ ಪ್ರಮಾಣದಲ್ಲಿ ಶಸ್ತ್ರಾಸ್ತ್ರ ತಯಾರಿಗೆ ಮಾರ್ಗ ದೊರೆತಂತಾಗಿದೆ. ಇನ್ನು 2001ರಲ್ಲಿ ಭಾರತ ಸರ್ಕಾರ ಖಾಸಗಿ ವಲಯಕ್ಕೆ ಸಣ್ಣ ಮತ್ತು ಮಧ್ಯಮ ಪ್ರಮಾಣದ ಶಸ್ತ್ರಾಸ್ತ್ರ ತಯಾರಿ ಮಾಡಲು ಅನುಮತಿ ನೀಡಿತ್ತು. ಕೇಂದ್ರ ಸರ್ಕಾರ ನಿರ್ಧಾರದ ಬಳಿಕ ಪಂಜ್ ಲಾಯ್ಡ್, ಎಲ್ ಅಂಡ್ ಟಿ ಮತ್ತು ಭಾರತ್ ಫೋರ್ಜ್ ನಂತಹ ಸಂಸ್ಥೆಗಳು ಖಾಸಗಿಯಾಗಿ ಶಸ್ತ್ರಾಸ್ತ್ರ ತಯಾರಿಗೆ 2001-2002ರಲ್ಲಿ ಪರವಾನಗಿ ಪಡೆದಿದ್ದವು.