ಮುಂಬೈ 26/11 ದಾಳಿ ಪ್ರಮುಖ ರುವಾರಿ ಉಗ್ರ ಹಫೀಜ್ ಸಯೀದ್
ಲಾಹೋರ್: ವಿವಾದಿತ ಜೆಎನ್ ಯು ಪ್ರಕರಣ ದಿನದಿಂದ ದಿನಕ್ಕೆ ಹೊಸ ಬಣ್ಣವನ್ನು ಪಡೆದುಕೊಳ್ಳುತ್ತಿದ್ದು, ಇದೀಗ ಪ್ರಕರಣ ಸಂಬಂಧ ಲಷ್ಕರ್-ಇ-ತೊಯ್ಬಾ ಸಂಘಟನೆ ಮುಖ್ಯಸ್ಥ ಹಾಗೂ ಮುಂಬೈ 26/11 ದಾಳಿ ಪ್ರಮುಖ ರುವಾರಿ ಉಗ್ರ ಹಫೀಜ್ ಸಯೀದ್ ಹೇಳಿಕೆಯನ್ನು ನೀಡಿದ್ದು, ನಾನು ಯಾರನ್ನೂ ಬೆಂಬಲಿಸಿಲ್ಲ. ಭಾರತೀಯ ಸಚಿವರು ತಮ್ಮ ದೇಶದ ಜನರನ್ನು ದಾರಿ ತಪ್ಪಿಸುತ್ತಿದ್ದಾರೆಂದು ಸೋಮವಾರ ಹೇಳಿಕೊಂಡಿದ್ದಾನೆ.
ಜೆಎನ್ ಯು ಪ್ರಕರಣ ಸಂಬಂಧ ನಿನ್ನೆ ತನ್ನ ಮೇಲೆ ಕೇಳಿಬಂದಿರುವ ಆರೋಪ ಸಂಬಂಧ ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದು, ಈ ವಿಡಿಯೋವನ್ನು ಹಫೀಜ್ ಯೂಟ್ಯೂಬಿನಲ್ಲಿ ಹಾಕಿದ್ದಾನೆ. ವಿಡಿಯೋದಲ್ಲಿ ಮಾತನಾಡಿರುವ ಪ್ರಕಾರ ಜೆಎನ್ ಯು ಪ್ರಕರಣದಲ್ಲಿ ಪ್ರತಿಭಟನೆ ಮಾಡುತ್ತಿರುವ ಕಾಶ್ಮೀರಿ ವಿದ್ಯಾರ್ಥಿಗಳ ಹಿಂದೆ ನಾನಿದ್ದೇನೆ ಎಂದು ಭಾರತೀಯ ಗೃಹ ಸಚಿವರು ಹೇಳಿಕೆ ನೀಡಿದ್ದಾರೆ. ತಮ್ಮ ಟ್ವಿಟರ್ ನಲ್ಲೂ ನನ್ನ ಹೆಸರನ್ನು ಬಳಸಿದ್ದಾರೆ. ಪ್ರಕರಣದಲ್ಲಿ ನನ್ನ ಪಾತ್ರವೇ ಇಲ್ಲ.
ನಾನು ಯಾರ ಹಿಂದೆಯೂ ಇಲ್ಲ. ಯಾವುದೇ ರೀತಿಯ ಟ್ವೀಟ್ ಮಾಡಿಲ್ಲ. ಇದು ನಿಜಕ್ಕೂ ನಕಲಿ ಟ್ವೀಟ್ ಆಗಿದೆ. ಪ್ರಕರಣದಲ್ಲಿ ನಾನಿದ್ದೇನೆಂದು ಹೇಳುತ್ತಿರುವುದು ಸುಳ್ಳು. ಭಾರತೀಯ ಸಚಿವರೇ ತಮ್ಮ ದೇಶದ ಜನತೆಯನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಹೇಳಿಕೊಂಡಿದ್ದಾರೆ.
ಈ ಹಿಂದೆ ಜೆಎನ್ ಯು ವಿವಾದ ಸಂಬಂಧ ಹೇಳಿಕೆ ನೀಡಿದ್ದ ಕೇಂದ್ರ ಸಚಿವ ರಾಜನಾಥ ಸಿಂಗ್ ಅವರು, ಪ್ರಕರಣದಲ್ಲಿ ಲಷ್ಕರ್-ಇ-ತೊಯ್ಬಾ ಸಂಘಟನೆಯ ಉಗ್ರ ಹಫೀಜ್ ಸಯೀದ್ ಬೆಂಬಲವಿದ್ದು, ಸಂಘಟನೆ ಬೆಂಬಲಿತರು ದೇಶ ವಿರೋಧಿ ಘೋಷಣೆಗಳನ್ನು ಕೂಗುತ್ತಿದ್ದಾರೆ. ಇದು ಸತ್ಯ. ಇದನ್ನು ದೇಶ ಅರ್ಥಮಾಡಿಕೊಳ್ಳಬೇಕಿದೆ ಎಂದು ಹೇಳಿದ್ದರು. ಇದರಂತೆ ಸಚಿವರ ಈ ಹೇಳಿಕೆಗೆ ಹಫೀಜ್ ಸಯೀದ್ ಎಂಬ ಹೆಸರನ್ನೊಳಗೊಂಡ ಟ್ವಿಟರ್ ಖಾತೆಯಿಂದ ಪ್ರತಿಕ್ರಿಯೆಯೊಂದು ಬಂದಿತ್ತು ಎಂದು ಹೇಳಲಾಗುತ್ತಿತ್ತು.
ಈ ಟ್ವಿಟರ್ ಖಾತೆ ಅಧಿಕೃತವಾಗಿರುವ ಕುರಿತಂತೆ ಹಲವು ಅನುಮಾನಗಳು ಮೂಡಿದ್ದವು. ಇದರಂತೆ ಪಾಕಿಸ್ತಾನ ಮೂಲದ ಮಾಧ್ಯಮವೊಂದು ಹಫೀಜ್ ಸಯೀದ್ ಅವರ ಟ್ವಿಟರ್ ಖಾತೆ ಕುರಿತಂತೆ ವರದಿಯೊಂದನ್ನು ಪ್ರಕಟಿಸಿತ್ತು. ಹಫೀಜ್ ಸಯೀದ್ ಎಂದಿರುವ ಟ್ವಿಟರ್ ಖಾತೆಯೊಂದು ನಕಲಿ ಖಾತೆಯಾಗಿದ್ದು, ಹಲವು ಸಮಯಗಳ ಹಿಂದೆಯೇ ಹಫೀಜ್ ಸಯೀದ್ ಹೊಂದಿದ್ದ ಟ್ವಿಟರ್ ಖಾತೆಯನ್ನು ರದ್ದು ಮಾಡಲಾಗಿತ್ತು ಎಂದು ಹೇಳಿತ್ತು.