ಜಮ್ಮು: ಪಾಕ್ ಆಕ್ರಮಿತ ಕಾಶ್ಮೀರವೂ(ಪಿಒಕೆ) ಸೇರಿದಂತೆ ಸಂಪೂರ್ಣ ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂದು ಬ್ರಿಟನ್ ಸಂಸದ ರಾಬರ್ಟ್ ಜಾನ್ ಬ್ಲಾಕ್ಮನ್ ಹೇಳಿದ್ದಾರೆ.
ಜಮ್ಮು ಪ್ರೆಸ್ ಕ್ಲಬ್ ನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಬ್ಲಾಕ್ಮನ್, ಜಮ್ಮು-ಕಾಶ್ಮೀರ ಪುನಾರಚನೆಯಾಗಬೇಕಿದ್ದು, ಪಾಕಿಸ್ತಾನದಿಂದ ಅಕ್ರಮವಾಗಿ ನಿಯಂತ್ರಿಸಲ್ಪಡುತ್ತಿರುವ ಪ್ರದೇಶವೂ ಸೇರಿದಂತೆ ಸಂಪೂರ್ಣ ಜಮ್ಮು-ಕಾಶ್ಮೀರ ಭಾರತದ ಪರಮಾಧಿಕಾರಕ್ಕೆ ಒಳಪಡಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಸ್ವಾತಂತ್ರ್ಯ ನಂತರ ಜಮ್ಮು- ಕಾಶ್ಮೀರದ ಮಹಾರಾಜ ತನ್ನ ರಾಜ್ಯವನ್ನು ಭಾರತದೊಂದಿಗೆ ವಿಲೀನಗೊಳಿಸಲು ಒಪ್ಪಿ ಸಹಿ ಹಾಕಿದ್ದರು. ಆದರೆ ಕಾಶ್ಮೀರದ ಭಾಗವನ್ನು ಪಾಕಿಸ್ತಾನ ಆಕ್ರಮಿಸಿಕೊಂಡಿದ್ದು, ಮಾತುಕತೆ ಮೂಲಕ ಪಾಕಿಸ್ತಾನ ಅದನ್ನು ಭಾರತಕ್ಕೆ ವಾಪಸ್ ನೀಡಬೇಕು ಎಂದು ಬ್ಲಾಕ್ಮನ್ ಹೇಳಿದ್ದಾರೆ.
ಇಂಗ್ಲೆಂಡ್ ನ ಹ್ಯಾರೋ ಪೂರ್ವ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಬ್ಲಾಕ್ಮನ್, ಈ ಹಿಂದೆ ಬ್ರಿಟನ್ ಸಂಸತ್ ನಲ್ಲಿ ಪಾಕಿಸ್ತಾನದ ಪರ ಲಾಭಿ ನಡೆಯುತ್ತಿತ್ತು, ಆದರೆ ಈಗ ಕಾಲ ಬದಲಾಗಿದೆ, ಭಾರತ ಸ್ನೇಹಿ ಬ್ರಿಟನ್ ಸಂಸದರು ಈಗ ಭಾರತದ ಪರವಾಗಿ ನಿಂತಿದ್ದಾರೆ ಎಂದು ಜಾನ್ ಬ್ಲಾಕ್ಮನ್ ತಿಳಿಸಿದ್ದಾರೆ.