ನವದೆಹಲಿ: ದೆಹಲಿ ಪೊಲೀಸ್ ಆಯುಕ್ತ ಬಿಎಸ್ ಬಸ್ಸಿ ಫೆಬ್ರವರಿ ಅಂತ್ಯಕ್ಕೆ ನಿವೃತ್ತಿಯಾಗುತ್ತಿದ್ದು, ದೆಹಲಿ ಬಂಧಿಕಾನೆಯ ಹಾಲಿ ಪ್ರಧಾನ ನಿರ್ದೇಶಕ ಅಲೋಕ್ ವರ್ಮಾ ದೆಹಲಿಯ ನೂತನ ಕಮಿಷನರ್ ಆಗಿ ಅಧಿಕಾರ ವಹಿಸಿಕೊಳ್ಳುವ ಸಾಧ್ಯತೆ ಇದೆ.
1977 ರ ಬ್ಯಾಚ್ ನ ಐಪಿಎಸ್ ಅಧಿಕಾರಿಯಾಗಿರುವ ಬಸ್ಸಿ ತಿಂಗಳಾಂತ್ಯಕ್ಕೆ ನಿವೃತ್ತಿಯಾಗಲಿದ್ದು ಮಾ.1 ರಿಂದ ನೂತನ ಕಮಿಷನರ್ ಅಧಿಕಾರ ಸ್ವೀಕರಿಸಬೆಕಿದೆ. ನಿವೃತ್ತಿಯಾಗಲಿರುವ ಭೀಮ್ ಸೇನ್ ಬಸ್ಸಿ ಕೇಂದ್ರ ಮಾಹಿತಿ ಆಯೋಗದಲ್ಲಿ ತೆರವಾಗಿರುವ ಮಾಹಿತಿ ಆಯುಕ್ತ ಸ್ಥಾನದ ಆಕಾಂಕ್ಷಿಯಾಗಿದ್ದಾರೆ ಎಂದೂ ಹೇಳಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆಯ್ಕೆ ಸಮಿತಿ ಮಾಹಿತಿ ಆಯುಕ್ತರ ನೇಮಕ ಮಾಡಲಿದ್ದು ಭೀಮ್ ಸೇನ್ ಬಸ್ಸಿ ಸಹ ಆಕಾಂಕ್ಷಿಯಾಗಿದ್ದು ಸಂಪುಟ ಕಾರ್ಯದರ್ಶಿ ಪಿಕೆ ಸಿನ್ಹಾ ನೇತೃತ್ವದ ಶೋಧನಾ ಸಮಿತಿ ನವೆಂಬರ್ ನಲ್ಲಿ ಬಸ್ಸಿ ಅವರ ಹೆಸರನ್ನು ಆಯ್ಕೆ ಪಟ್ಟಿಯಲ್ಲಿ ಸೇರಿಸಿದ್ದಾರೆ ಎಂಬುದು ಪಿಟಿಐ ವರದಿ ಮೂಲಕ ಬಹಿರಂಗವಾಗಿದೆ. ಮಾಹಿತಿ ಆಯುಕ್ತರ ಮೂರು ಹುದ್ದೆಗಳು ಖಾಲಿ ಇದ್ದು, ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಮಾಜಿ ಕಾರ್ಯದರ್ಶಿ ಶ್ಯಾಮಲ್ ಕೆ ಸರ್ಕಾರ್ ಸೇರಿದಂತೆ ಹಲವರು ಆಕಾಂಕ್ಷಿಗಳಾಗಿದ್ದಾರೆ.