ರಾಜ್ಯಪಾಲ ಜೆಪಿ ರಾಜಖೋವಾ ಅವರು ನೂತನ ಮುಖ್ಯಮಂತ್ರಿ ಕಲಿಖೊ ಪುಲ್ ಅವರಿಗೆ ಪ್ರಮಾಣವಚನ ಬೋಧಿಸಿದರು.
ನವದೆಹಲಿ: ರಾಷ್ಟ್ರಪತಿ ಆಡಳಿತ ಹಿಂಪಡೆದ ಬೆನ್ನಲ್ಲೇ, ಕಾಂಗ್ರೆಸ್ ನ ಬಂಡಾಯ ನಾಯಕ ಕಲಿಖೊ ಪುಲ್ ಅವರು ಅರುಣಾಚಲ ಪ್ರದೇಶದ ಹೊಸ ಮುಖ್ಯಮಂತ್ರಿಯಾಗಿ ಶುಕ್ರವಾರ ರಾತ್ರಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಅರುಣಾಚಲ ಪ್ರದೇಶದಲ್ಲಿ ಮೂರು ಸಾವಿರ ಜನಸಂಖ್ಯೆ ಹೊಂದಿದ ಕಮನ್ ಮಿಶ್ಮಿ ಬುಡಕಟ್ಟು ಜನಾಂಗಕ್ಕೆ ಸೇರಿದವರಾದ ಪುಲ್, ಹವೈ ಮೂಲದವರಾಗಿದ್ದಾರೆ. ಕಲಿಖೊ ಪುಲ್ ಅವರು 2003ರಿಂದ 2007ರವರೆಗೆ ಹಣಕಾಸು ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ರಾಜ್ಯಪಾಲ ಜೆಪಿ ರಾಜಖೋವಾ ಅವರು ಕಲಿಖೊ ಪುಲ್ ಅವರಿಗೆ ಪ್ರಮಾಣವಚನ ಬೋಧಿಸಿದರು.
ಸುಪ್ರೀಂ ಕೋರ್ಟ್ ಬಹುಮತ ಸಾಬೀತಿಗೆ ಅವಕಾಶ ನಿರಾಕರಿಸಿದ ತಕ್ಷಣವೇ ರಾಷ್ಟ್ರಪತಿ ಆಡಳಿತವನ್ನು ರದ್ದು ಮಾಡಲಾಗಿತ್ತು. ಕಲಿಖೊ ಪುಲ್ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಬಂಡಾಯ ಶಾಸಕರೂ ಸೇರಿ 31 ಶಾಸಕರು ಮಂಗಳವಾರ ರಾಜ್ಯಪಾಲ ಜೆಪಿ ರಾಜಖೋವಾ ಅವರನ್ನು ಭೇಟಿ ಮಾಡಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದರು. ರಾಷ್ಟ್ರಪತಿ ಆಡಳಿತ ರದ್ದು ಮಾಡುವಂತೆ ಬುಧವಾರ ಕೇಂದ್ರ ಸಂಪುಟ ಶಿಫಾರಸು ಮಾಡಿತ್ತು.