ನವದೆಹಲಿ: ಸರ್ಕಾರಿ ಹುದ್ದೆಗಳಲ್ಲಿ ಹಾಗೂ ಶೈಕ್ಷಣಿಕ ಕೇಂದ್ರಗಳಲ್ಲಿ ಮೀಸಲಾತಿಗೆ ಆಗ್ರಹಿಸಿ ಹರ್ಯಾಣದಲ್ಲಿ ಜಾಟ್ ಸಮುದಾಯ ನಡೆಸುತ್ತಿರುವ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಪ್ರತಿಭಟನಾಕಾರರನ್ನು ಬಲವಂತವಾಗಿ ತೆರವುಗೊಳಿಸಿ ಸಾಮಾನ್ಯ ಜನಜೀವನಕ್ಕೆ ಅನುಕೂಲ ಮಾಡಿಕೊಡುವಂತೆ ಕೇಂದ್ರ ಸರ್ಕಾರ ಭದ್ರತಾ ಸಿಬ್ಬಂದಿ ಸೋಮವಾರ ಸ್ಪಷ್ಟವಾಗಿ ಸೂಚಿಸಿದೆ.
ಇಂದು ಬೆಳಗ್ಗೆಯಷ್ಟೇ ಪ್ರತಿಭಟನೆ ನಿಲ್ಲಿಸಿದ್ದ ಜಾಟ್ ಸಮುದಾಯದವರು ಮಧ್ಯಾಹ್ನದ ವೇಳೆಗೆ ಮತ್ತೆ ಆರಂಭಿಸಿದ್ದರು. ರೊಹ್ ಟಕ್ ಮತ್ತು ಸೋನೆಪತ್ ನಲ್ಲಿ ಹಿಂಸಾಕೃತ್ಯ ನಡೆಸಿದ್ದಾರೆ.ಕೆಲವು ಭಾಗಗಳಲ್ಲಿ ರಸ್ತೆ ತಡೆ ನಡೆಸಿದ್ದಾರೆ.
ದೆಹಲಿ-ಅಂಬಲಾ ಹೆದ್ದಾರಿಯ ಸಂಚಾರವನ್ನು ಮತ್ತೆ ಮುಚ್ಚಲಾಗಿದೆ. ಜಾಟ್ ಸಮುದಾಯಕ್ಕೆ ಮೀಸಲಾತಿ ನೀಡುವ ಕುರಿತು ರಾಜ್ಯ ಸರ್ಕಾರ ಲಿಖಿತ ರೂಪದಲ್ಲಿ ಭರವಸೆ ನೀಡಬೇಕೆಂಬುದು ಪ್ರತಿಭಟನಾಕಾರರ ಆಗ್ರಹವಾಗಿದೆ. ಕಳೆದ ಒಂಭತ್ತು ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿ ಇದುವರೆಗೆ 16 ಮಂದಿ ಸಾವನ್ನಪ್ಪಿ 150ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಇದೀಗ ಬಹದ್ದೂರ್ ಘರ್ ನಲ್ಲಿ ಜಾಟ್ ಮುಖಂಡರ ಸಭೆ ನಡೆಯುತ್ತಿದೆ. ಅಲ್ಲಿ ಪ್ರತಿಭಟನೆಯನ್ನು ಮುಂದುವರಿಸಬೇಕೆ ಅಥವಾ ಹಿಂತೆಗೆದುಕೊಳ್ಳಬೇಕೆ ಎಂಬುದು ನಿರ್ಧಾರವಾಗಲಿದೆ. ಹರ್ಯಾಣ ರಾಜ್ಯದಲ್ಲಿ ಇತರ ಹಿಂದುಳಿದ ವರ್ಗಗಳಡಿಯಲ್ಲಿ ಜಾಟ್ ಸಮುದಾಯಕ್ಕೆ ವಿಶೇಷ ಸ್ಥಾನಮಾನ ನೀಡಲು ಬಿಜೆಪಿ ಸರ್ಕಾರ ಒಪ್ಪಿಕೊಂಡಿತ್ತು. ಹಾಗಾಗಿ ಇಂದು ಬೆಳಗ್ಗೆ ಪ್ರತಿಭಟನೆ ಸ್ಥಗಿತಗೊಂಡಿತ್ತು. ಆದರೆ ಮಧ್ಯಾಹ್ನದ ಹೊತ್ತಿಗೆ ಮತ್ತೆ ಆರಂಭಿಸಿದ ಪ್ರತಿಭಟನಾಕಾರರು ಲಿಖಿತ ಹೇಳಿಕೆ ನೀಡಬೇಕೆಂದು ಒತ್ತಾಯಿಸಿದೆ.
ಕರ್ಫ್ಯೂ ವಿಧಿಸಲಾಗಿದ್ದರೂ ಕೂಡ ರೊಹ್ ಟಕ್ ನಲ್ಲಿ ನ್ಯಾಯಾಧೀಶರೊಬ್ಬರ ಕಾರಿಗೆ ಬೆಂಕಿ ಹಚ್ಚಲಾಗಿದೆ. ಸೋನೆಪತ್ ನಲ್ಲಿ ಮತ್ತೆ ಹಿಂಸಾಚಾರ ಆರಂಭಗೊಂಡಿರುವುದರಿಂದ ರಾಷ್ಟ್ರೀಯ ಹೆದ್ದಾರಿ-1ನ್ನು ಮುಚ್ಚಲಾಗಿದೆ. ಹಿಸ್ಸಾರ್ ಮತ್ತು ಜಿಂದ್ ಗೆ ಹೋಗುವ ರಾಷ್ಟ್ರೀಯ ಹೆದ್ದಾರಿ 10ನ್ನು ಕೂಡ ಸಂಪೂರ್ಣವಾಗಿ ಮುಚ್ಚಲಾಗಿದೆ. ಇಂದು ಕೂಡ ಶಾಲಾ ಕಾಲೇಜು ಮುಚ್ಚಲಾಗಿದೆ. ರೊಹ್ ಟಕ್, ಬಿವನಿ, ಜಜ್ಝರ್ ಮತ್ತು ಸೋನಿಪತ್ ನಲ್ಲಿ ಕರ್ಫ್ಯೂ ಹೇರಲಾಗಿದೆ.