ದೇಶ

ಜೆಎನ್ ಯು ವಿವಾದ: ಕುಲಸಚಿವರ ವಜಾಕ್ಕೆ ಆರೋಪಿ ವಿದ್ಯಾರ್ಥಿ ಆಗ್ರಹ

Lingaraj Badiger
ನವದೆಹಲಿ: ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯ(ಜೆಎನ್ ಯು)ದಲ್ಲಿ ದೇಶ ವಿರೋಧಿ ಷೋಷಣೆ ಕೂಗಿದ ಆರೋಪ ಎದುರಿಸುತ್ತಿರುವ ಐವರು ವಿದ್ಯಾರ್ಥಿಗಳ ಪೈಕಿ ಒಬ್ಬರಾದ ಅನಂತ್ ಪ್ರಕಾಶ್ ಅವರು, ಘಟನೆ ಸಂಬಂಧಿಸಿದಂತೆ ವಿವಿ ಕುಲಪತಿ ಮಮಿದಲ ಜಗದೀಶ್ ಕುಮಾರ್ ಅವರು ಕಠಿಣ ನಿರ್ಧಾರ ತೆಗೆದುಕೊಳ್ಳಬೇಕು ಮತ್ತು ತಮ್ಮ ವಿರುದ್ಧದ ಎಲ್ಲಾ ಆರೋಪಗಳನ್ನು ಕೈಬಿಡಬೇಕು ಎಂದು ಒತ್ತಾಯಿಸಿದ್ದಾರೆ.
ಇದೇ ವೇಳೆ ತಮ್ಮ ವಿರುದ್ಧ ನಡೆದ ಪಿತೂರಿಗೆ ಕುಲಸಚಿವ ಪ್ರೊ. ಬುಪಿಂದರ್ ಝುತ್ಶಿ ಅವರೇ ಕಾರಣವಾಗಿದ್ದು, ಅವರನ್ನು ಈ ಕೂಡಲೇ ಹುದ್ದೆಯಿಂದ ವಜಾಗೊಳಿಸಬೇಕು ಎಂದು ಅನಂತ್ ಪ್ರಕಾಶ್ ಆಗ್ರಹಿಸಿದ್ದಾರೆ.
ಸರ್ಕಾರದ ಉದ್ದೇಶ ಸ್ಪಷ್ಟವಾಗಿದ್ದು, ಜೆಎನ್ ಯು ನಾಯಕರನ್ನು ಟಾರ್ಗೆಟ್ ಮಾಡುವುದಕ್ಕೆ ಮತ್ತು ರಾಜಕೀಯ ಮಾಡುವುದನ್ನು ತಡೆಯಬೇಕು. ಹೀಗಾಗಿ ಕುಲಪತಿಗಳು ಈ ಸಂಬಂಧ ಕಠಿಣ ನಿರ್ಧಾರ ತೆಗೆದುಕೊಳ್ಳಬೇಕು ಮತ್ತು ತಮ್ಮ ವಿರುದ್ಧದ ಆರೋಪಗಳನ್ನು ಕೈಬಿಡಬೇಕು ಎಂದು ಪ್ರಕಾಶ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
'ವಿವಿಯಲ್ಲಿ ರಾಜಕೀಯ ಮಾಡಲಾಗುತ್ತಿದೆ. ನಾವು ಸರ್ಕಾರದ ವಿರುದ್ಧ ಮಾತನಾಡಿದ್ದಕ್ಕೆ ನಮಗೆ ಶಿಕ್ಷೆ ನೀಡಲಾಗಿದೆ' ಎಂದು ಪ್ರಕಾಶ್ ಆರೋಪಿಸಿದ್ದಾರೆ.
ಉಮರ್‌ ಖಾಲಿದ್‌ ಸಹಿತ ದೇಶದ್ರೋಹದ ಆರೋಪಕ್ಕೆ ಗುರಿಯಾಗಿ ಭೂಗತರಾಗಿದ್ದ ಐವರು ಜೆಎನ್‌ಯು ವಿದ್ಯಾರ್ಥಿಗಳು ನಿನ್ನೆ ತಡ ರಾತ್ರಿ ವಿವಿ ಆವರಣದಲ್ಲಿ ಪ್ರತ್ಯಕ್ಷರಾಗಿದ್ದು, ಸುದ್ದಿ ತಿಳಿದೊಡನೆಯೇ ಪೊಲೀಸರು ಅವರನ್ನು ವಶಕ್ಕೆ ತೆಗೆದುಕೊಳ್ಳಲು ಧಾವಿಸಿ ಬಂದಿದ್ದಾರೆ. ಆದರೆ ನಾವು ಪೊಲೀಸರಿಗೆ ಶರಣಾಗುವುದಿಲ್ಲ ; ಬೇಕಿದ್ದರೆ ಪೊಲೀಸರು ನಮ್ಮನ್ನು ಬಂಧಿಸಿ ಒಯ್ಯಲಿ' ಎಂದು ಈ ವಿದ್ಯಾರ್ಥಿಗಳು ಹೇಳಿದ್ದಾರೆ.
SCROLL FOR NEXT