ನವದೆಹಲಿ; ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯ ಕುರಿತಂತೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಬಿಜೆಪಿ ಶಾಸಕ ಜ್ಞಾನ್ದೇವ್ ಅಹುಜಾ ವಿರುದ್ಧ ಇದೀಗ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಬುಧವಾರ ಸಮನ್ಸ್ ಜಾರಿ ಮಾಡಿರುವುದಾಗಿ ತಿಳಿದುಬಂದಿದೆ
ನಿನ್ನೆಯಷ್ಟೇ ಜೆಎನ್ ಯು ವಿವಾದ ಕುರಿತಂತೆ ಹೇಳಿಕೆ ನೀಡಿದ್ದ ಅಹುಜಾ ಅವರು, ಜೆಎನ್ ಯು ವಿವಿಯಲ್ಲಿ ಪ್ರತಿದಿನ 2 ಸಾವಿರ ಮದ್ಯದ ಬಾಟಲಿಗಳು, 10 ಸಾವಿರ ಉಪಯೋಗಿಸಿದ ಸಿಗರೇಟ್, 4 ಸಾವಿರ ಬೀಡಿಗಳು, 50 ಸಾವಿರ ಮೂಳೆಗಳು, 2 ಸಾವಿರ ಚಿಪ್ಸ್ ಕವರ್ಗಳು, 3 ಸಾವಿರ ಬಳಕೆಯಾದ ಕಾಂಡೋಮ್ ಗಳು ಹಾಗೂ 500 ಗರ್ಭನಿರೋಧಕ ಚುಚ್ಚು ಮದ್ದುಗಳು ಪತ್ತೆಯಾಗುತ್ತವೆ. ಅಲ್ಲದೆ, ರಾತ್ರಿ 8 ರ ನಂತರ ವಿವಿಯಲ್ಲಿ ಯುವತಿಯರು ಅರೆ ನಗ್ನ ನೃತ್ಯಗಳನ್ನು ಮಾಡುತ್ತಿರುತ್ತಾರೆ ಎಂದು ಹೇಳಿದ್ದರು.
ಬಿಜೆಪಿ ಶಾಸಕನ ಈ ಹೇಳಿಕೆ ಸಾಕಷ್ಟು ವಿರೋಧಗಳು ಹಾಗೂ ಟೀಕೆಗಳು ವ್ಯಕ್ತವಾಗಿದ್ದವು. ಇದೀಗ ಶಾಸಕ ಈ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಅಹುಜಾ ವಿರುದ್ಧ ಸಮನ್ಸ್ ಜಾರಿ ಮಾಡಿದ್ದು, ದೆಹಲಿಗೆ ಬಂದು ಹೇಳಿಕೆ ಸಂಬಂಧ ಸ್ಪಷ್ಟನೆ ನೀಡುವಂತೆ ಸೂಚನೆ ನೀಡಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ.