ನವದೆಹಲಿ: ದೇಶ ದ್ರೋಹದ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯ(ಜೆಎನ್ ಯು) ವಿದ್ಯಾರ್ಥಿ ಉಮರ್ ಖಾಲಿದ್ ಉಗ್ರ ಅಫ್ಜಲ್ ಗುರು ಪರ ಘೋಷಣೆ ಕೂಗಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ.
ನಿನ್ನೆ ತಂಡರಾತ್ರಿ ಪೊಲೀಸರಿಗೆ ಶರಣಾಗಿರುವ ಉಮರ್ ಖಾಲಿದ್ ಹಾಗೂ ಅನಿರ್ಬನ್ ಭಟ್ಟಾಚಾರ್ಯ ಅವರನ್ನು ದೆಹಲಿ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದು, ವಿಚಾರಣೆ ವೇಳೆ ಅಫ್ಜಲ್ ಪರ ಘೋಷಣೆ ಕೂಗಿರುವುದಾಗಿ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.
ಫೆಬ್ರವರಿ 9ರಂದು ಅಂತಹ ಕಾರ್ಯಕ್ರಮ ಆಯೋಜಿಸಿದ್ದು ಏಕೆ? ಅದಕ್ಕೆ ಹಣ ಎಲ್ಲಿಂದ ಬಂತು ಎಂಬುದು ಸೇರಿದಂತೆ ಹಲವು ಪ್ರಶ್ನೆಗಳನ್ನು ಪೊಲೀಸರು ಕೇಳಿದ್ದಾರೆ.
ಉಮರ್ ಖಾಲಿದ್ ಸೇರಿದಂತೆ ಐವರು ವಿದ್ಯಾರ್ಥಿಗಳಿಗೆ ಬಂಧನದಿಂದ ರಕ್ಷಣೆ ನೀಡಲು ನಿರಾಕರಿಸಿದ್ದು ದೆಹಲಿ ಹೈಕೋರ್ಟ್, ಪೊಲೀಸರಿಗೆ ಶರಣಾಗುವಂತೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಮಂಗಳವಾರ ತಡ ರಾತ್ರಿ ಉಮರ್ ಖಾಲಿದ್ ಹಾಗೂ ಅನಿರ್ಬನ್ ಭಟ್ಯಾಚಾರ್ಯ ಪೊಲೀಸರಿಗೆ ಶರಣಾಗಿದ್ದು. ವಿಚಾರಣೆ ಬಳಿಕ ಇಂದು ಮಧ್ಯಾಹ್ನ ಕೋರ್ಟ್ ಗೆ ಹಾಜರುಪಡಿಸುವ ಸಾಧ್ಯತೆ ಇದೆ.