ದೇಶ

ಹೇಳಿಕೆಯನ್ನು ಪೊಲೀಸರೇ ನಿರ್ದೇಶಿಸಿದ್ದರು: ಕನ್ಹಯ್ಯ

Manjula VN

ನವದೆಹಲಿ: ನಾನು ನೀಡಿದ್ದ ಬಹುತೇಕ ಹೇಳಿಕೆಗಳನ್ನು ಪೊಲೀಸರೇ ನಿರ್ದೇಶಿಸಿದ್ದರು. ಹೇಳಿಕೆ ವೇಳೆಯಲ್ಲಿ ಪೊಲೀಸರು ಒತ್ತೃಡ ಹೇರಿದ್ದರೆಂದು ಜೆಎನ್ ಯು ವಿವಾದಕ್ಕೆ ಸಂಬಂಧಿಸಿ ಬಂಧಿತನಾಗಿರುವ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯ ಕುಮಾರ್ ಹೇಳಿಕೊಂಡಿದ್ದಾನೆ.

ಪ್ರಕರಣ ಸಂಬಂಧ ಈಗಾಗಲೇ ತಿಹಾರ್ ಜೈಲಿನಲ್ಲಿರುವ ಕನ್ಹಯ್ಯಾ ಜೈಲಿನಿಂದಲೇ ಅಲ್ಲಿನ ಪರಿಸ್ಥಿತಿ ಕುರಿತಂತೆ ರಾಷ್ಟ್ರೀಯ ಮಾನವ ಹಕ್ಕು ಆಯೋಗಕ್ಕೆ ಪತ್ರ ಬರೆದಿದ್ದು, ಪೊಲೀಸರ ವಶದಲ್ಲಿದ್ದಾಗ, ವಿಚಾರಣೆ ಮಾಡಿದ ಅಧಿಕಾರಿಗಳು ನನಗೆ ಹೊಡೆಯಲಿಲ್ಲ. ಆದರೆ, ಮಾನಸಿಕವಾಗಿ ಒತ್ತಡವನ್ನು ಹೇರಿದ್ದರು. ನಾನು ನೀಡದ ಹೇಳಿಕೆಗಳನ್ನು ಅವರೇ ದಾಖಲಿಸಿಕೊಂಡಿದ್ದರು ಎಂದು ಹೇಳಿಕೊಂಡಿದ್ದಾನೆ.

ವಿಚಾರಣೆಗಾಗಿ ಪಟಿಯಾಲ ನ್ಯಾಯಾಲಯಕ್ಕೆ ಪೊಲೀಸರು ಕರೆದುಕೊಂಡು ಹೋಗಿದ್ದರು. ಅವರ ಭದ್ರತೆಯನ್ನು ನೋಡಿದ ಕೂಡಲೇ ಸಾಕಷ್ಟು ಭಯಭೀತನಾದೆ. ನ್ಯಾಯಾಲಯದ ಆವರಣಕ್ಕೆ ಹೋಗುತ್ತಿದ್ದಂತೆ ವಕೀಲರ ವೇಷ ಹಾಕಿದ್ದ ಗುಂಪು ನನ್ನ ಮೇಲೆ ಹಲ್ಲೆ ನಡೆಸಿತು. ಹಲ್ಲೆಯ ಘಟನೆ ನೆನೆದರೆ ಇದು ಪೂರ್ವ ನಿಯೋಜಿತ ಘಟನೆ ಎನಿಸುತ್ತದೆ. ಹಲ್ಲೆ ವೇಳೆ ನನ್ನ ಎಳೆದು, ಹೊಡೆದು, ನಿಂದಿಸಿದ್ದರು. ಈ ವೇಳೆ ಸಾಕಷ್ಟು ಭಯ ಹಾಗೂ ಆಶ್ಚರ್ಯಚಕಿತನಾಗಿದ್ದೆ. ಹಲ್ಲೆ ನಡೆಸುತ್ತಿದ್ದರೂ ಕೂಡ ಪೊಲೀಸರು ಮೂಕ ಪ್ರೇಕ್ಷಕರಂತೆ ನೋಡುತ್ತಿದ್ದರು.  ನ್ಯಾಯಾಲಯ ನಂ.3ರ ಕೊಠಡಿಗೆ ಹೋದಾಗಲೂ ವಕೀಲರು ಮತ್ತೆ ನನ್ನ ಮೇಲೆ ಹಲ್ಲೆ ನಡೆಸಿದ್ದರು. ಆದರೆ, ಪೊಲೀಸರು ನನ್ನ ರಕ್ಷಣೆ ಮಾಡಿದರು.

ಅಂದು ನಡೆದ ಘಟನೆ ಇಂದಿಗೂ ಭಯವಾಗುತ್ತದೆ. ಈಗಲೂ ನಾನು ಆ ಭಯ ಹಾಗೂ ಭ್ರಮೆಯಲ್ಲಿದ್ದೇನೆ. ಆ ಅಹಿತಕರ ಘಟನೆ ನನ್ನ ಕುಟುಂಬಕ್ಕೆ ಸಂಭವಿಸುವುದರ ಬಗ್ಗೆ ಭಯವಾಗುತ್ತಿದೆ.

ಪ್ರಕರಣ ಬೆಳಕಿಗೆ ಬರುತ್ತಿದ್ದೆ ದೆಹಲಿ ಪೊಲೀಸರು ವಿವಿಯಲ್ಲಿರುವ ನನ್ನ ಹಾಸ್ಟೆಲ್ ರೂಮ್ ಬಳಿ ಬಂದು ನನ್ನ ಬಂಧನಕ್ಕೊಳಪಡಿಸಿದ್ದರು. ಆದರೆ ಬಂಧನ ಕುರಿತಂತೆ ಪೊಲೀಸರು ನನಗೆ ಯಾವುದೇ ಸಮನ್ಸ್ ಆಗಲಿ ಅಥವಾ ವಾರೆಂಟ್ ಆಗಲಿ ಜಾರಿ ಮಾಡಿರಲಿಲ್ಲ. ಪೊಲೀಸರು ನನ್ನ ಪರ್ಸ್, ಮೊಬೈಲ್, ಎಟಿಎಂ, ಗುರುತಿನ ಚೀಟಿ, ಬ್ಯಾಂಕ್ ಖಾತೆಯ ಮಾಹಿತಿಗಳು, ಫೇಸ್ ಬುಕ್ ಖಾತೆ ಹಾಗೂ ಪಾಸ್ ವರ್ಡ್ ಇಮೇಲ್ ಖಾತೆ ಹಾಗೂ ಪಾಸ್ ವರ್ಡ್, ಟ್ವಿಟರ್ ಖಾತೆ ಹಾಗೂ ಪಾಸ್ ವರ್ಡ್ ಗಳ ಕುರಿತಂತೆ ಮಾಹಿತಿ ತಿಳಿದುಕೊಂಡರು ಎಂದು ಹೇಳಿದ್ದಾನೆ

ನನ್ನನ್ನು ಯಾವ ಕಾರಣಕ್ಕೆ ಬಂಧಿಸಲಾಯಿತು, ಬಂಧನಕ್ಕೊಳಪಡಿಸಿರುವ ಪೊಲೀಸರು ನನ್ನ ವಿರುದ್ಧವರುವ ಸಾಕ್ಷ್ಯಾಧಾರಗಳನ್ನು ಒದಗಿಸಲಿ ಎಂದು ನ್ಯಾಯಾಧೀಶರನ್ನು ಕೇಳಿದ್ದಾನೆ. ನ್ಯಾಯಾಲಯದಲ್ಲಿ ವಿಚಾರಣೆ ನಡೆಯುವಾಗ ಪೊಲೀಸರು ನ್ಯಾಯಾಧೀಶರಿಗೆ ವಿಡಿಯೋವೊಂದನ್ನು ತೋರಿಸಿದ್ದರು. ಈ ವೇಳೆ ಫೆ.9 ರಂದು ನಡೆದ ಕಾರ್ಯಕ್ರಮವನ್ನು ಆಯೋಜಿಸಿರಲಿಲ್ಲ. ನಾನು ಆ ಕಾರ್ಯಕ್ರದಲ್ಲಿಯೇ ಇರಲಿಲ್ಲ ಎಂದು ಹೇಲಿದೆ.

ತನಿಖೆ ವೇಳೆ ತನಿಖಾಧಿಕಾರಿಗಳು ದೇಶದ ಏಕತೆ ಹಾಗೂ ಸಮಗ್ರತೆ ಬಗ್ಗೆ ಕೇಳಿದರು. ನನಗೆ ದೇಶ ಏಕತೆ ಮೇಲೆ ಹಾಗೂ ಸಂವಿಧಾನದ ಮೇಲೆ ಸಂಪೂರ್ಣವಾಗಿ ನಂಬಿಕೆ ಎಂದು ಹೇಳಿದ್ದೆ. ಈ ಬಗ್ಗೆ ನನ್ನ ಅಭಿಪ್ರಾಯವನ್ನು ಬರೆಯುವಂತೆ ಅಧಿಕಾರಿಗಳು ತಿಳಿಸಿದ್ದರು. ನಾನು ಬರೆದಿದ್ದೆ. ಈ ವೇಳೆ ಮನವಿ ರೂಪದಲ್ಲಿ ಬರೆಯಲು ಹೇಳಿದ್ದರು. ನನಗೆ ಏನಾಗುತ್ತಿದೆ ಎಂಬುದರ ಬಗ್ಗೆ ಅರಿವೇ ಇರಲಿಲ್ಲ. ಈ ಬಗ್ಗೆ ನನಗೆ ಯಾವುದೇ ಅಭಿಪ್ರಾಯವಿರಲಿಲ್ಲ. ಅಧಿಕಾರಿಗಳು ಹೇಳಿದಂತೆ ಬರೆದಿದ್ದೆ ಎಂದು ಕನ್ಹಯ್ಯಾ ಮಾನವ ಹಕ್ಕು ಆಯೋಗಕ್ಕೆ ಬರೆದಿರುವ ಪತ್ರದಲ್ಲಿ ಹೇಳಿಕೊಂಡಿದ್ದಾನೆ.

SCROLL FOR NEXT