ನವದೆಹಲಿ: ಆಮ್ ಆದ್ಮಿ ಪಕ್ಷದ ಶಾಸಕ ಅಮಾನತುಲ್ಲಾ ಖಾನ್ ಅವರು ನರೇಂದ್ರ ಮೋದಿ ಸರ್ಕಾರದ ವಿರುದ್ಧ ದ್ವೇಷಪೂರಿತ ಭಾಷಣ ಮಾಡಿದ್ದಾರೆ. ಈ ಭಾಷಣದ ವೀಡಿಯೋ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ.
ಫೆ. 16ರಂದು ಮಾಡಿದ ಭಾಷಣ ಇದಾಗಿದ್ದು ಅಮಾನತುಲ್ಲಾ ಖಾನ್ ಅವರು ಈ ಭಾಷಣದಲ್ಲಿ ಮೋದಿ ಸರ್ಕಾರದ ವಿರುದ್ಧ ಅತೀ ಕೆಟ್ಟ ಪದಗಳನ್ನು ಬಳಕೆ ಮಾಡಿದ್ದಾರೆ.
ಅದೇ ವೇಳೆ ಮುಸ್ಲಿಂ ನಾಯಕ ಮೌಲಾನಾ ಮುಫ್ತಿ ಅಬ್ಬಾಸ್ ಸಾಮಿ ಖ್ವಾಸ್ಮಿ ಅವರನ್ನು ದೇಶ ದ್ರೋಹಿ ಚಟುವಟಿಕೆಯ ಆರೋಪದಲ್ಲಿ ಬಂಧಿಸಿದ್ದಕ್ಕೆ ಮೋದಿ ಸರ್ಕಾರ ವಿರುದ್ಧ ಖಾನ್ ಕಿಡಿ ಕಾರಿದ್ದಾರೆ.
ಸಭೆಯನ್ನುದ್ದೇಶಿಸಿ ಮಾತನಾಡಿದ ಖಾನ್ ನವದೆಹಲಿಯಲ್ಲಿ ಗೃಹ ಸಚಿವ ರಾಜ್‌ನಾಥ್ ಸಿಂಗ್ ಅವರ ನಿವಾಸಕ್ಕೆ ಮುತ್ತಿಗೆ ಹಾಕುವಂತೆ ಆಹ್ವಾನ ನೀಡಿದ್ದಾರೆ. ದೆಹಲಿಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಮುಸ್ಲಿಮರಿದ್ದೇವೆ. ನಾವೆಲ್ಲರೂ ಸೇರಿ ಸಚಿವರ ನಿವಾಸಕ್ಕೆ ಮುತ್ತಿಗೆ ಹಾಕಿದರೆ, ನಮ್ಮ ಮಕ್ಕಳನ್ನು ಯಾರೊಬ್ಬರೂ ಮುಟ್ಟುವ ಗೋಜಿಗೆ ಬರುವುದಿಲ್ಲ ಎಂದು ಖಾನ್ ಗುಡುಗಿದ್ದಾರೆ.
ಮುಫ್ತಿ ಸಾಮಿ ಮೇಲಿನ ಆರೋಪ ಸಾಬೀತು ಪಡಿಸಲು ಪೊಲೀಸರ ಬಳಿ ಯಾವುದೇ ಸಾಕ್ಷ್ಯವಿಲ್ಲ. ಇಲ್ಲಿ ಭಯದ ವಾತಾವರಣವನ್ನು ಸೃಷ್ಟಿಸಲಾಗುತ್ತಿದೆ. ನಾವೆಲ್ಲರೂ ಇದರ ವಿರುದ್ಧ ಹೋರಾಡಬೇಕಿದೆ. ಸಾಮಿ ಅವರನ್ನು ಬಂಧಮುಕ್ತಗೊಳಿಸಲು ನಾವೆಲ್ಲರೂ ಪ್ರತಿಭಟನೆ ಮಾಡಬೇಕಿದೆ ಎಂದು ಖಾನ್ ಮುಸ್ಲಿಂ ಜನತೆಗೆ ಕರೆ ನೀಡಿದ್ದಾರೆ.