ದೇಶ

ಜೆಎನ್ ಯು ಕಾಂಡೋಮ್ ಟೀಕೆ ಬಗ್ಗೆ ಸಾಕ್ಷ್ಯ ಒದಗಿಸಲು ಸಿದ್ಧ: ಬಿಜೆಪಿ ಶಾಸಕ ಗ್ಯಾಂದೇವ್ ಅಹುಜಾ

Sumana Upadhyaya

ಅಲ್ವರ್(ರಾಜಸ್ತಾನ): ತಮ್ಮ ಹಿಂದಿನ ಹೇಳಿಕೆಗೆ ಬದ್ಧರಾಗಿರುವ ಬಿಜೆಪಿ ಶಾಸಕ ಗ್ಯಾಂದೇವ್ ಅಹುಜಾ, ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಪ್ರತಿನಿತ್ಯ ಮೂರು ಸಾವಿರಕ್ಕೂ ಹೆಚ್ಚು ಕಾಂಡೋಮ್ ಗಳು ಕಾಣಸಿಗುತ್ತವೆ ಎಂದು ಹೇಳಿದ್ದಾರೆ. ಅಲ್ಲದೆ ತಮ್ಮ ಹೇಳಿಕೆಗೆ ಸರಿಯಾದ ಸಾಕ್ಷಿಯನ್ನು ಸದ್ಯದಲ್ಲಿಯೇ ಸುದ್ದಿಗೋಷ್ಠಿಯಲ್ಲಿ ಬಹಿರಂಗಪಡಿಸುತ್ತೇನೆ ಎಂದು ಹೇಳಿದ್ದಾರೆ.

ರಾಜಸ್ತಾನದ ಅಲ್ವರ್ ವಿಧಾನಸಭಾ ಕ್ಷೇತ್ರದ ಶಾಸಕ  ಅಹುಜಾ, ನಾನು ಬೇರೆ ರಾಜಕೀಯ ನಾಯಕರಂತೆ ಸುಮ್ಮನೆ ಆರೋಪ ಮಾಡುವುದಿಲ್ಲ. ಕೆಲವು ನಾಯಕರು ಹೇಳಿಕೆ ನೀಡಿದ ಮೇಲೆ ನಾನು ಹಾಗೆ ಹೇಳಿರಲಿಲ್ಲ ಎಂದೋ ಅಥವಾ ನಾನು ಹೇಳಿದ್ದರ ಅರ್ಥ ಬೇರೆಯೇ ಇತ್ತು ಎಂದೋ ಹೇಳುತ್ತಾರೆ. ಆದರೆ ನಾನು ಮೊನ್ನೆ ಮಾಡಿರುವ ಆರೋಪಕ್ಕೆ ಈಗಲೂ ಬದ್ಧನಾಗಿದ್ದೇನೆ. ನಾನು ಕ್ರಮಬದ್ಧವಾಗಿ ಪತ್ರಿಕಾಗೋಷ್ಠಿಯನ್ನು ಕರೆದು ಸಾಕ್ಷಿಗಳನ್ನು ಒದಗಿಸುತ್ತೇನೆ ಎಂದು ಹೇಳಿದ್ದಾರೆ.

ಜೆಎನ್ ಯು ದಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತವೆ ಎಂದು ಆರೋಪಿಸಿದ್ದ ಅಹುಜಾ, 3 ಸಾವಿರಕ್ಕೂ ಅಧಿಕ ಬಳಸಿರುವ ಕಾಂಡೋಮ್ ಗಳು, 10 ಸಾವಿರ ಸಿಗರೇಟು ತುಂಡುಗಳು, 4 ಸಾವಿರ ಬೀಡಿ ತುಂಡುಗಳು, 500ಕ್ಕೂ ಅಧಿಕ ಬಳಸಿದ ಗರ್ಭನಿರೋಧಕ ಚುಚ್ಚುಮದ್ದುಗಳು, ಸುಮಾರು 50 ಸಾವಿರ ಸಣ್ಣ ಮತ್ತು ದೊಡ್ಡ ಮೂಳೆ ತುಂಡುಗಳು ಬಿದ್ದಿರುವುದನ್ನು ನೋಡಬಹುದು. ಅಲ್ಲಿ ಪುರುಷರು ಮಹಿಳೆಯರ ಮೇಲೆ ಅಕ್ರಮವೆಸಗುತ್ತಾರೆ.

ವಿದ್ಯಾರ್ಥಿಗಳು ಕಾಲೇಜು ಕ್ಯಾಂಪಸ್ಸಿನ ಒಳಗೆ ರಾತ್ರಿ 8 ಗಂಟೆಯಾದ ನಂತರ ಡ್ರಗ್ ತೆಗೆದುಕೊಳ್ಳುತ್ತಾರೆ. ಜೆಎನ್ ಯುನಲ್ಲಿ ಕಲಿಯುತ್ತಿರುವವರು ಸಣ್ಣ ಮಕ್ಕಳಲ್ಲ. ಮಕ್ಕಳ ಪೋಷಕರು. ಹಗಲು ಹೊತ್ತಿನಲ್ಲಿ ಶಾಂತಿ ಪ್ರತಿಭಟನೆಯಲ್ಲಿ ತೊಡಗುವ ಇವರು ರಾತ್ರಿಯಾದ ನಂತರ ಅಶ್ಲೀಲ ನೃತ್ಯಗಳಲ್ಲಿ ಕುಣಿಯುತ್ತಾರೆ. ಇದು ಜೆಎನ್ ಯು ಸಂಸ್ಕೃತಿ ಎಂದು ಶಾಸಕ ಗ್ಯಾಂದೇವ್ ಅಹುಜಾ ಆರೋಪಿಸಿದ್ದಾರೆ.

SCROLL FOR NEXT