ದೇಶ

ಪಠಾಣ್ ಕೋಟ್ ಉಗ್ರರ ದಾಳಿ: ಜಮ್ಮು-ಕಾಶ್ಮೀರದಲ್ಲಿ ಹೈ ಅಲರ್ಟ್

Srinivasamurthy VN

ಜಮ್ಮು: ಪಠಾಣ್ ಕೋಟ್ ಸೇನಾ ವಾಯುನೆಲೆ ಮೇಲೆ ಉಗ್ರರ ಗುಂಪು ದಾಳಿ ನಡೆಸಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮಕೈಗೊಂಡಿರುವ ಅಧಿಕಾರಿಗಳು ಶನಿವಾರ ಜಮ್ಮು-ಕಾಶ್ಮೀರದಾದ್ಯಂತ ಹೈ ಅಲರ್ಟ್ ಘೋಷಿಸಿದ್ದಾರೆ.

ಪಠಾಣ್ ಕೋಟ್-ಜಮ್ಮು ಹೆದ್ದಾರಿಯನ್ನು ಈಗಾಗಲೇ ಬಂದ್ ಮಾಡಿರುವ ಅಧಿಕಾರಿಗಳು ಜಮ್ಮುವಿನ ಕತುವಾ ಜಿಲ್ಲೆ ಸೇರಿದಂತೆ ಹಲವೆಡೆ ಹೈ ಅಲರ್ಟ್ ಘೋಷಣೆ ಮಾಡಿದ್ದಾರೆ. ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಭದ್ರತೆ ಒದಗಿಸಲಾಗಿದೆ.

ಭದ್ರತೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಹಿರಿಯ ಪೊಲೀಸ್ ಅಧಿಕಾರಿ, ಜಮ್ಮವಿನಾದ್ಯಂತ ಈಗಾಗಲೇ ಹೈ ಅಲರ್ಟ್ ಘೋಷಿಸಲಾಗಿದ್ದು, ಕತುವಾ ಜಿಲ್ಲೆಯಲ್ಲಿ ಬಿಗಿ ಭದ್ರತೆಯನ್ನು ಒದಗಿಸಲಾಗಿದೆ. ಪಂಜಾಬ್ ನಿಂದ ರಾಜ್ಯಕ್ಕೆ ಬರುವ ಎಲ್ಲಾ ವಾಹನಗಳನ್ನು ಈಗಾಗಲೇ ತಪಾಸಣೆ ನಡೆಸಲಾಗಿದ್ದು, ಭದ್ರತಾ ಪಡೆಗಳು ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದ್ದಾರೆ.

ಮೂಲಗಳ ಪ್ರಕಾರ ಕಾರ್ಯಾಚರಣೆ ನಡೆಸುತ್ತಿರುವ ಸೇನೆಯು ಇದೀಗ ಜಮ್ಮು ಮತ್ತು ಕಾಶ್ಮೀರ ಹೆದ್ದಾರಿಗಳ ತಪಾಸಣೆ ನಡೆಸುತ್ತಿದ್ದು, ಉಗ್ರರು ಹೆದ್ದಾರಿ ಮೂಲಕ ಜಮ್ಮುಮತ್ತು ಕಾಶ್ಮೀರಕ್ಕೆ ಬಂದಿರಬಹುದೆಂಬ ಹಲವು ಶಂಕೆಗಳು ಮೂಡತೊಡಗಿದೆ.

SCROLL FOR NEXT