ದೇಶ

ಪಂಜಾಬ್ ಸೇನಾ ವಾಯುನೆಲೆ ಮೇಲೆ ಉಗ್ರರ ದಾಳಿ: 3 ಯೋಧರು ಹುತಾತ್ಮ, 4 ಉಗ್ರರ ಹತ್ಯೆ

Manjula VN

ನವದೆಹಲಿ: ಪಂಜಾಬ್ ಗುರುದಾಸ್ ಪುರದಲ್ಲಿರುವ ಪಠಾಣ್ ಕೋಟ್ ಸೇನಾ ವಾಯುನೆಲೆ ಮೇಲೆ ಉಗ್ರರ ಗುಂಪೊಂದು ಶನಿವಾರ ದಾಳಿ ನಡೆಸಿದ್ದು, ದಾಳಿ ವೇಳೆ ನಾಲ್ವರು ಉಗ್ರರನ್ನು ಸೇನಾ ಸಿಬ್ಬಂದಿ ಹತ್ಯೆಮಾಡಿದ್ದಾರೆ.

ನಿನ್ನೆಯಷ್ಟೇ ಸೇನಾ ಸಮವಸ್ತ್ರ ಧರಿಸಿದ್ದ ವ್ಯಕ್ತಿಯೊಬ್ಬ ಅನುಮಾನಾಸ್ಪದವಾಗಿ ಓಡಾಡುತ್ತಿರುವುದಾಗಿ ತಿಳಿದುಬಂದಿತ್ತು. ಇದಲ್ಲದೆ, ಉಗ್ರರು ಎಸ್ ಪಿಯೊಬ್ಬರನ್ನು ನಿನ್ನೆ ಅಪಹರಿಸಿದ್ದರು. ಅಪಹರಿಸಿ 1 ಗಂಟೆ ನಂತರ ಅವರನ್ನು ಬಿಡುಗಡೆ ಮಾಡಿ ಕಳುಹಿಸಿಕೊಟ್ಟಿದ್ದರು. ಆದರೆ ಅಧಿಕಾರಿಯ ಬಳಿಯಿದ್ದ ಕಾರು ಹಾಗೂ ಗನ್"ನ್ನು ತೆಗೆದುಕೊಂಡಿದ್ದರು. ಹೀಗಾಗಿ ಯೋಧರು ಗಡಿಯಲ್ಲಿ ಉಗ್ರರಿಗಾಗಿ ಹುಡುಕಾಟ ಆರಂಭಿಸಿದ್ದರು.

ಇಂದು ಬೆಳಿಗ್ಗೆ 4.30ರ ಸುಮಾರಿಗೆ ಏಕಾಏಕಿ ಉಗ್ರರ ಗುಂಪು ಸೇನಾ ವಾಯುನೆಲೆ ಗುಂಡಿನ ದಾಳಿ ನಡೆಸಿದ್ದು, ಸೇನೆಯ ಏರ್ ಬೇಸ್ ನಲ್ಲಿ ನಿಲ್ಲಿಸಲಾಗಿದ್ದ ವಿಮಾನವನ್ನು ಉಡಾಯಿಸಲು ಯತ್ನ ನಡೆಸಿದೆ. ಅಲ್ಲದೆ ಶಸ್ತ್ರಸಜ್ಜಿತರಾಗಿರುವ ಉಗ್ರರು ಸ್ಥಳದಲ್ಲಿ ಆತ್ಮಾಹುತಿ ದಾಳಿ ನಡೆಸಲು ಸಂಚು ರೂಪಿಸಿದ್ದಾರೆಂದು ಎನ್ನಲಾಗುತ್ತಿದೆ.

ಉಗ್ರರು ಜೈ-ಶಿ ಮೊಹಮ್ಮದ್ ಉಗ್ರರ ಸಂಘಟನೆಗೆ ಸೇರಿದ್ದವರಾಗಿದ್ದು, ಹೊಸವರ್ಷಾಚರಣೆ ದಿನದಂದೇ ದಾಳಿ ನಡೆಸಲು ಸಂಚು ರೂಪಿಸಿದ್ದಾರೆ, ಆದರೆ, ಇಂದು ದಾಳಿ ನಡೆಸಿದ್ದಾರೆ. ಉಗ್ರರ ದಾಳಿ ಹಿಂದೆ ನಿಷೇಧಿತ ಉಗ್ರ ಸಂಘಟನೆ ಲಷ್ಕರ್-ಇ-ತೊಯ್ಬಾ ಕೈವಾಡವಿದೆ ಎಂದು ಹೇಳಲಾಗುತ್ತಿದೆ.

ಇದೀಗ ಉಗ್ರರನ್ನು ಸದೆ ಬಡಿಯಲು ಸೇನಾ ಸಿಬ್ಬಂದಿ ಕಾರ್ಯಾಚರಣೆಗಿಳಿದಿದ್ದು, ಈಗಾಗಲೇ ನಾಲ್ವರು ಉಗ್ರರನ್ನು ಹತ್ಯೆ ಮಾಡಿದೆ. ಸೇನಾ ವಾಯುನೆಲೆಯ ಕಟ್ಟಡವೊಂದರಲ್ಲಿ ಉಗ್ರರು ಅಡಗಿ ಕುಳಿತಿದ್ದು, ಸೇನೆ ಮತ್ತು ಉಗ್ರರ ನಡುವೆ ಗುಂಡಿನ ಚಕಮಕಿ ನಡೆಸುತ್ತಿದೆ. ಉಗ್ರರು ಸೇನಾ ಸಮವಸ್ತ್ರ ಧರಿಸಿರುವುದಾಗಿ ತಿಳಿದುಬಂದಿದೆ.

ಉಗ್ರರ ಗುಂಡಿನ ದಾಳಿಗೆ ಮೂವರು ಯೋಧರು ಹುತಾತ್ಮರಾಗಿದ್ದು, 6 ಯೋಧರಿಗೆ ಗಂಭೀರವಾಗಿ ಗಾಯಗಳಾಗಿವೆ. ಸ್ಥಳದಲ್ಲಿ ಬಿಗಿ ಭದ್ರತೆಯನ್ನು ಒದಗಿಸಲಾಗಿದ್ದು, ಈಗಾಗಲೇ ಪಂಜಾಬ್ ನಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದೆ. ಎನ್ಎಸ್ ಜಿ ಯೋಧರು ಗಡಿಯಲ್ಲಿ ಸುತ್ತುವರೆದಿದ್ದಾರೆಂದು ತಿಳಿದುಬಂದಿದೆ.

SCROLL FOR NEXT