ಎನ್‌ಐಎ ಮುಖ್ಯಸ್ಥ ಶರದ್ ಕುಮಾರ್
ಮುಂಬೈ : ಪಠಾಣ್ ಕೋಟ್ ದಾಳಿಯ ಹಿಂದೆ ಪಾಕ್ ಕೈವಾಡವಿದೆ ಎಂದು ಪ್ರಸ್ತುತ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾದಳದ (ಎನ್‌ಐಎ) ಮುಖ್ಯಸ್ಥ ಹೇಳಿದ್ದಾರೆ.
ತನಿಖೆಯ ಬಗ್ಗೆ ಸುದ್ದಿ ಮಾಧ್ಯಮವೊಂದರಲ್ಲಿ ಮಾತನಾಡಿದ ಎನ್‌ಐಎ ಮುಖ್ಯಸ್ಥ ಶರದ್ ಕುಮಾರ್, ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಎಫ್‌ಐಆರ್ ದಾಖಲಾಗಿದ್ದು ಇದರಿಂದ ಈ ಕೃತ್ಯದ ಹಿಂದೆ ಪಾಕ್ ಕೈವಾಡವಿದೆ ಎಂದು ಹೇಳಬಹುದು. ದಾಳಿಗೆ ಮುನ್ನ ಉಗ್ರರು ವಶ ಪಡಿಸಿಕೊಡ ಇನ್ನೋವಾ ಟ್ಯಾಕ್ಸಿಯ ಚಾಲಕನ ಹತ್ಯೆ, ಗುರುದಾಸ್‌ಪುರ್ ಎಸ್ಪಿ ಸಲ್ವಿಂದರ್ ಸಿಂಗ್ ಮತ್ತು ವಾಯುನೆಲೆ ಮೇಲೆ ದಾಳಿ ಈ ಮೂರು ಪ್ರಕರಣದ ಬಗ್ಗೆ ಎಫ್‌ಐಆರ್ ದಾಖಲಾಗಿದೆ. ಈ ಎಫ್‌ಐಆರ್‌ಗಳಿಂದ ಈ ದುಷ್ಕೃತ್ಯದ ಹಿಂದೆ ಪಾಕ್ ಉಗ್ರ ಸಂಘಟನೆಗಳ ಕೈವಾಡವಿದೆ. ಆದಾಗ್ಯೂ ತನಿಖೆ ಮುಂದುವರಿದಿದ್ದು, ಇಂಥವರೇ ದಾಳಿ ನಡೆಸಿದ್ದಾರೆ ಎಂದು ಈಗ ಹೇಳಲು ಸಾಧ್ಯವಿಲ್ಲ.
ದಾಳಿ ನಡೆಸಿದ ಉಗ್ರರ ಮಾಹಿತಿ ಕಲೆ ಹಾಕಲಾಗಿದ್ದು, ಮುಂದಿನ ತನಿಖೆಗೆ ಪಾಕ್ ಸಹಾಯ ನೀಡಬಹುದು ಎಂದು ಭಾವಿಸಿದ್ದೇವೆ. ಈಗಾಗಲೇ ಉಗ್ರರ ಡಿಎನ್‌ಎ ಸ್ಯಾಂಪಲ್ ಗಳನ್ನು ಪಾಕ್‌ಗೆ ಕಳುಹಿಸಲಾಗಿದ್ದು, ಅಲ್ಲಿಂದ ಧ್ವನಿ ಸ್ಯಾಂಪಲ್‌ಗಳನ್ನು ಕಳಿಸುವಂತೆ ಕೋರಲಾಗಿದೆ ಎಂದು ಶರದ್ ಕುಮಾರ್ ಹೇಳಿದ್ದಾರೆ.